ಮಧ್ಯಪ್ರದೇಶದ ರಾಜ್ಗಢ್ ಪಟ್ಟಣದಲ್ಲಿ 20 ಜನರ ಮೇಲೆ ದಾಳಿ ನಡೆಸಿ ಭೀತಿ ಹುಟ್ಟಿಸಿದ್ದ ಕೋತಿಯನ್ನು ಕೊನೆಗೂ ಸೆರೆಹಿಡಿಯಲಾಗಿದೆ. ದಾಳಿ ನಡೆಸಿದ ಎರಡು ವಾರಗಳ ಸತತ ಪ್ರಯತ್ನದ ನಂತರ ಕೋತಿ ಬೋನಿಗೆ ಬಿದ್ದಿದೆ. ಸ್ಥಳೀಯ ಆಡಳಿತವು ಕೋತಿಯನ್ನ ಸುರಕ್ಷಿತವಾಗಿ ಹಿಡಿದವರಿಗೆ 21 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿತ್ತು.
ನಿನ್ನೆ ಸಂಜೆ ಉಜ್ಜಯಿನಿಯಿಂದ ಬಂದ ರಕ್ಷಣಾ ತಂಡವು ಸ್ಥಳೀಯ ಅಧಿಕಾರಿಗಳು ಮತ್ತು ಸ್ಥಳೀಯ ನಿವಾಸಿಗಳೊಂದಿಗೆ ಸೇರಿಕೊಂಡು ಕೋತಿಯನ್ನು ಹಿಡಿದಿದೆ. ಕೋತಿಯನ್ನು ಪತ್ತೆ ಮಾಡಲು ಡ್ರೋನ್ ಬಳಸಿದ ತಂಡ ಮಂಗ ಹಿಡಿಯುವಲ್ಲಿ ಯಶಸ್ವಿಯಾಯಿತು. ಅರಣ್ಯ ಇಲಾಖೆ ಸಿಬ್ಬಂದಿ ಕೋತಿಯನ್ನು ಸೆರೆಹಿಡಿದು ಕೊಂಡೊಯ್ತಿದ್ದಂತೆ ಜನರ ಗುಂಪು ಜೈ ಶ್ರೀ ರಾಮ್ ಮತ್ತು ಜೈ ಬಜರಂಗ ಬಲಿ ಘೋಷಣೆಗಳನ್ನು ಕೂಗಿತು.
ಕೋತಿಗಳ ದಾಳಿಯಿಂದಾಗಿ ಭಯಗೊಂಡಿದ್ದ ಆ ಪ್ರದೇಶದಲ್ಲಿನ ಜನ ತನ್ನ ಮನೆಯ ಟೆರೇಸ್ನಲ್ಲಿ ಬಂದೂಕು ಹಿಡಿದು ಕಾವಲು ಕಾಯುತ್ತಿದ್ದರು.
ಕಳೆದ ಹದಿನೈದು ದಿನಗಳ ಹಿಂದೆ ಕೋತಿ ದಾಳಿ ನಡೆಸಿದ 20 ಜನರ ಪೈಕಿ ಎಂಟು ಮಕ್ಕಳೂ ಸೇರಿದ್ದಾರೆ. ಕೋತಿ ಛಾವಣಿಗಳು ಮತ್ತು ಕಿಟಕಿಯ ಸರಳುಗಳ ಮೇಲೆ ಕುಳಿತು ಇದ್ದಕ್ಕಿದ್ದಂತೆ ಜನರ ಮೇಲೆ ದಾಳಿ ಮಾಡುತ್ತಿತ್ತು. ಅನೇಕರು ಗಾಯಗೊಂಡು ಹೊಲಿಗೆ ಹಾಕಿಸಿಕೊಂಡಿದ್ದಾರೆ. ದಾಳಿಕೋರ ಕೋತಿಯನ್ನ ಹಿಡಿಯಲು ವಿಫಲವಾದ ನಂತರ, ಸ್ಥಳೀಯ ಅಧಿಕಾರಿಗಳು 21,000 ನಗದು ಬಹುಮಾನವನ್ನು ಘೋಷಿಸಿದರು ಮತ್ತು ವಿಶೇಷ ರಕ್ಷಣಾ ತಂಡವನ್ನು ಕರೆಸಿದ್ದರು.