ಕೊರೊನಾ, ಪ್ರಪಂಚದಾದ್ಯಂತದ ಜನರ ಜೀವನ ಶೈಲಿಯನ್ನು ಬದಲಿಸಿದೆ. ಲಾಕ್‌ಡೌನ್‌ನಿಂದಾಗಿ, ಅನೇಕ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಜನರು ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ. ಕೊರೊನಾದಿಂದಾಗಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಮಹತ್ವದ ಘಟನೆ ನಡೆದಿದೆ. 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಪರಾಧಿ ತಾನೇ ಶರಣಾಗಿದ್ದಾನೆ.
ಸುದ್ದಿಯ ಪ್ರಕಾರ, 64 ವರ್ಷದ ಡಾರ್ಕೊ ದೇಸಿಕ್, 1992 ರಲ್ಲಿ ಗ್ರಾಪ್ಟನ್ ಜೈಲಿನಿಂದ ತಪ್ಪಿಸಿಕೊಂಡಿದ್ದ. ನಂತ್ರ ಹೊಟ್ಟೆಪಾಡಿಗಾಗಿ ಕೂಲಿ ಕೆಲಸ ಮಾಡ್ತಿದ್ದನಂತೆ. ಜೂನ್ ನಲ್ಲಿ ಕೊರೊನಾ ಲಾಕ್ ಡೌನ್ ನಿಂದಾಗಿ ಆತ ಉದ್ಯೋಗ ಕಳೆದುಕೊಂಡಿದ್ದ. ಇದ್ರಿಂದ ಆತನ ಜೀವನ ನಿರ್ವಹಣೆ ಕಷ್ಟವಾಗಿತ್ತು. ಕೆಲಸವಿಲ್ಲದೆ, ವಾಸಿಸಲು ಮನೆಯಿಲ್ಲದೆ ಇದ್ದ ವ್ಯಕ್ತಿ, ಶರಣಾಗಲು ನಿರ್ಧರಿಸಿದ್ದಾನೆ.
ಸಮುದ್ರ ತೀರದಲ್ಲಿ ಮಲಗಿದ್ದ ವ್ಯಕ್ತಿ, ಕೊನೆಗೆ ಪೊಲೀಸರಿಗೆ ಶರಣಾಗಿದ್ದಾನೆ. ಜಾಮೀನು ಪಡೆಯಲು ನಿರಾಕರಿಸಿದ ವ್ಯಕ್ತಿ, ಜೈಲುವಾಸ ಮುಂದುವರೆಸುವುದಾಗಿ ಹೇಳಿದ್ದಾನೆ. 1992ರಲ್ಲಿ ಜೈಲು ಶಿಕ್ಷೆಯಾಗಿತ್ತು. ಕೋರ್ಟ್, 7 ವರ್ಷಗಳ ಜೈಲು ಶಿಕ್ಷೆಯನ್ನು ಆತನಿಗೆ ನೀಡಿತ್ತು.
ದೇಸಿಕ್ ನನ್ನು 1991 ರಲ್ಲಿ ಅಕ್ರಮವಾಗಿ ಗಾಂಜಾ ಕೃಷಿ ಮಾಡಿದ್ದಕ್ಕಾಗಿ ಬಂಧಿಸಲಾಗಿತ್ತು. 1992 ರಲ್ಲಿ ಆತ ಜೈಲಿನಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದ. ಮನೆಯಿದ್ದರೂ, ಹೆಚ್ಚಿನ ಸಮಯವನ್ನು ಆತ ಸಿಡ್ನಿ ಸಮುದ್ರ ತೀರದಲ್ಲಿ ಕಳೆದಿದ್ದನಂತೆ. ಆಸ್ಟ್ರೇಲಿಯಾ ಟಿವಿ ಚಾನೆಲ್ ಒಂದರಲ್ಲಿ ಮೋಸ್ಟ್ ವಾಂಟೆಡ್ ಎಂಬುದು ಗೊತ್ತಾಗ್ತಿದ್ದಂತೆ ಆತ ದಂಗಾಗಿದ್ದನಂತೆ.