
2023ರ ಲಾಭ ತಂದ ಭಾರತೀಯ ಚಲನಚಿತ್ರ:
ಸುದೀಪ್ತೋ ಸೇನ್ ಅವರ ‘ದಿ ಕೇರಳ ಸ್ಟೋರಿ’ ಸೂಪರ್ ಹಿಟ್ ಆಗಿ ಹೊರಹೊಮ್ಮಿತು. ಕಳೆದ ವರ್ಷ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಂತೆಯೇ, ಈ ಚಲನಚಿತ್ರವನ್ನು ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಲಾಯಿತು. ಬಹಳಷ್ಟು ವಿವಾದಗಳ ಹೊರತಾಗಿಯೂ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಿತು. ಈ ಚಿತ್ರವನ್ನು ಕೇವಲ 15 ಕೋಟಿ ರೂ.ಗಳಲ್ಲಿ ನಿರ್ಮಿಸಲಾಯಿತು. ಆದರೆ, ಅದರ ಜಾಗತಿಕ ನಿವ್ವಳ ಸಂಗ್ರಹ (ತೆರಿಗೆಗಳನ್ನು ಕಡಿತಗೊಳಿಸಿದ ನಂತರ) 250 ಕೋಟಿ ರೂ. ಅತ್ಯಂತ ಕಡಿಮೆ ಬಜೆಟ್ ನಲ್ಲಿ ನಿರ್ಮಿಸಲಾದ ಈ ಚಿತ್ರಕ್ಕಾದ ವೆಚ್ಚಕ್ಕಿಂತ ಬರೋಬ್ಬರಿ ಶೇ. 1500 ರಷ್ಟು ಲಾಭ ತಂದುಕೊಟ್ಟಿತು.
ಗದರ್-2, ಜವಾನ್, ಜೈಲರ್ ಅನ್ನು ಕೇರಳ ಸ್ಟೋರಿ ಹೇಗೆ ಸೋಲಿಸಿತು?
ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವೆಂದರೆ ಶಾರುಖ್ ಖಾನ್ ಅವರ ಜವಾನ್. ಈ ಚಿತ್ರವು ವಿಶ್ವಾದ್ಯಂತ ಸುಮಾರು 1150 ಕೋಟಿ ರೂಪಾಯಿ ಗಳಿಸಿದೆ. ಇದರ ನಿವ್ವಳ ಮೌಲ್ಯವು ಸುಮಾರು 900 ಕೋಟಿ ರೂಪಾಯಿ. ಇದು ಚಿತ್ರಕ್ಕೆ ಶೇ. 200 ರಷ್ಟು ಲಾಭ ತಂದಿದೆ. ಅದೇ ರೀತಿ, ಶಾರುಖ್ ಅವರ ಇನ್ನೊಂದು ಸೂಪರ್ ಹಿಟ್ ಸಿನಿಮಾ ಪಠಾಣ್ ಶೇ. 240 ರಷ್ಟು ಲಾಭ (ರೂ. 250 ಕೋಟಿ ಬಜೆಟ್‌ನಲ್ಲಿ ರೂ. 850 ಕೋಟಿ) ತಂದಿದೆ. ಗದರ್-2 ಶೇ. 500 (ರೂ. 80 ಕೋಟಿ ಬಜೆಟ್‌ನಲ್ಲಿ ರೂ. 490 ಕೋಟಿ) ಹೆಚ್ಚು ಲಾಭ ಗಳಿಸಿದೆ. ದಕ್ಷಿಣದಿಂದ ಅತಿ ಹೆಚ್ಚು ಗಳಿಕೆ ಮಾಡಿದ ಎರಡು ಚಿತ್ರಗಳು ಕೂಡ ಉತ್ತಮ ಪ್ರದರ್ಶನ ನೀಡಿವೆ. ರಜನಿಕಾಂತ್ ಅವರ ಜೈಲರ್ ಸರಿಸುಮಾರು ಶೇ.150 ಲಾಭವನ್ನು ಪಡೆದರೆ, ವಿಜಯ್ ಅವರ ಲಿಯೋ ಶೇ.80 ರಷ್ಟು ಲಾಭವನ್ನು ಪಡೆದುಕೊಂಡಿದೆ.
ದಿ ಕೇರಳ ಸ್ಟೋರಿ..
ವಿಪುಲ್ ಶಾ ನಿರ್ಮಿಸಿದ, ಕೇರಳ ಸ್ಟೋರಿಯಲ್ಲಿ ಅದಾ ಶರ್ಮಾ ಅವರು ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ. ಕೇರಳದ ಮಹಿಳೆಯರು ಐಸಿಸ್‌ನಿಂದ ಹನಿ ಟ್ರ್ಯಾಪ್ ಆಗಿ, ಬಲವಂತವಾಗಿ ಮತಾಂತರಗೊಂಡ ಕಥೆಯನ್ನು ಈ ಚಿತ್ರ ಆಧರಿಸಿದೆ. ಬಿಡುಗಡೆಯ ಮೊದಲು, ಚಲನಚಿತ್ರವು ನಿಷೇಧ ಮತ್ತು ಬಹಿಷ್ಕಾರದ ಕರೆಗಳನ್ನು ಎದುರಿಸಿತು. ಸಿನಿಮಾವನ್ನು ಬಿಡುಗಡೆ ಮಾಡಲು ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ಎದುರಿಸಬೇಕಾಯಿತು. ಅಂತಿಮವಾಗಿ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು.