ಭಾರತದಲ್ಲಿ ನಡೆದ ಅತ್ಯಂತ ದುಬಾರಿ ಮದುವೆಯೆಂದರೆ ಅದು 2018ರಲ್ಲಿ ನಡೆದ ಇಶಾ ಅಂಬಾನಿ ಮತ್ತು ಆನಂದ್ ಪಿರಮಾಲ್ ಅವರದ್ದು. ಬರೋಬ್ಬರಿ 700 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅವರ ಅದ್ಧೂರಿ ವಿವಾಹ ನೆರವೇರಿತ್ತು. ಆದರೆ ಇದಕ್ಕೂ ಮುನ್ನ ಭಾರತದಲ್ಲಿ ಅದ್ಧೂರಿ ಜೋಡಿ ವಿವಾಹವೊಂದು ನಡೆದಿದೆ. ಇದುವರೆಗೂ ಭಾರತದಲ್ಲಿ ನಡೆದ ಅದ್ಧೂರಿ ಜೋಡಿ ವಿವಾಹ ಎಂಬ ಹೆಗ್ಗಳಿಕೆಗೆ ಸಹೋದರರಾದ ಸುಶಾಂತೋ ಮತ್ತು ಸೀಮಂತೋ ರಾಯ್ ಅವರ ಜೋಡಿ ವಿವಾಹ ಹೆಸರು ಗಳಿಸಿದೆ.
ಸಹಾರಾ ಗ್ರೂಪ್ ಅಧ್ಯಕ್ಷ ಸುಬ್ರತಾ ರಾಯ್ ಅವರು ಬೃಹತ್ ನಿವ್ವಳ ಮೌಲ್ಯ ಮತ್ತು ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಈ ಮಾಜಿ ಬಿಲಿಯನೇರ್ ತನ್ನ ಇಬ್ಬರು ಪುತ್ರರಾದ ಸುಶಾಂತೋ ಮತ್ತು ಸೀಮಂತೋ ಅವರ ಮದುವೆಗೆ 2004 ರಲ್ಲಿ ದುಡ್ಡಿನ ಹೊಳೆಯನ್ನೇ ಹರಿಸಿದ್ದರು.
ಭಾರತದ ಅತ್ಯಂತ ದುಬಾರಿ ವಿವಾಹಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಸುಶಾಂತೋ ಮತ್ತು ಸೀಮಂತೋ ರಾಯ್ ಅವರ ವಿವಾಹ ಸಮಾರಂಭವು ಇಶಾ ಅಂಬಾನಿ ಮತ್ತು ಆನಂದ್ ಪಿರಮಾಲ್ ಅವರ ನಂತರದ ಬಜೆಟ್ ಅನ್ನು ಹೊಂದಿದೆ. ಇವರ ಮದುವೆ ಸಮಾರಂಭದ ಬಜೆಟ್ ಬರೋಬ್ಬರಿ 550 ಕೋಟಿ ರೂ.
ಸುಬ್ರತಾ ರಾಯ್ ತಮ್ಮ ಪುತ್ರರ ಮದುವೆಗೆ 11,000 ಅತಿಥಿಗಳನ್ನು ಆಹ್ವಾನಿಸಿದ್ದರು. ಲಖ್ನೋದಲ್ಲಿ ನಾಲ್ಕು ದಿನಗಳ ಕಾಲ ನಡೆದ ಮದುವೆಗೆ ವಿದೇಶಿ ಗಣ್ಯರನ್ನು ಆಹ್ವಾನಿಸಲು ಅವರು ಖಾಸಗಿ ಜೆಟ್‌ಗಳನ್ನು ಬಾಡಿಗೆ ಪಡೆದಿದ್ದರು.
ಸುಶಾಂತೋ, ರಿಚಾ ಅಹುಜಾ ಮತ್ತು ಸೀಮಂತೋ, ಚಾಂಟಿನಿ ಅವರನ್ನು ವಿವಾಹವಾದರು. ಅವರ ಪುತ್ರರ ಅದ್ದೂರಿ ವಿವಾಹ ಮಾತ್ರವಲ್ಲದೆ, ಸುಬ್ರೋತೊ ರಾಯ್ ಅವರು 101 ಹಿಂದುಳಿದ ಯುವತಿಯರ ವಿವಾಹವನ್ನೂ ಆಯೋಜಿಸಿದ್ದರು. ಮತ್ತು ಮದುವೆಯ ಸಂಭ್ರಮದಲ್ಲಿ 15,000 ಕ್ಕೂ ಹೆಚ್ಚು ಬಡವರಿಗೆ ಊಟದ ವ್ಯವಸ್ಥೆ ಮಾಡಿದ್ದರು .
ಈ ಸಮಾರಂಭದಲ್ಲಿ ಅನೇಕ ಖ್ಯಾತ ರಾಜಕಾರಣಿಗಳು, ಉದ್ಯಮಿಗಳು ಮತ್ತು ಬಾಲಿವುಡ್ ತಾರೆಯರು ಉಪಸ್ಥಿತರಿದ್ದರು ಮತ್ತು ಸಮಾರಂಭದಲ್ಲಿ 100 ಕ್ಕೂ ಹೆಚ್ಚು ತಿನಿಸುಗಳನ್ನು ತಯಾರಿಸಲಾಗಿತ್ತು.
ಸುಶಾಂತೋ ರಾಯ್ ಮತ್ತು ಸೀಮಂತೋ ರಾಯ್ ಅವರ ಮದುವೆಯಲ್ಲಿ ಅಮಿತಾಭ್ ಬಚ್ಚನ್, ಐಶ್ವರ್ಯಾ ರೈ, ಅನಿಲ್ ಅಂಬಾನಿ ಮತ್ತು ಮುಲಾಯಂ ಸಿಂಗ್ ಯಾದವ್ ಭಾಗವಹಿಸಿದ್ದರು.