ಭಾರತದ ಮೂರನೇ ಅಲೆಯ ಸುಮಾರು 70-80 ಪ್ರತಿಶತದಷ್ಟು ಕೋವಿಡ್ ಪ್ರಕರಣಗಳು ಒಮಿಕ್ರಾನ್ ರೂಪಾಂತರವಾಗಿರಲಿವೆ ಎಂದು ಭಾರತದ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ ಎನ್‌ಕೆ ಅರೋರಾ ಅವರು ಹೇಳಿದ್ದಾರೆ.
ಈಗಲೂ ಈಶಾನ್ಯ ಭಾರತ ಮತ್ತು ಪಶ್ಚಿಮ ಬಂಗಾಳದಲ್ಲಿ ಡೆಲ್ಟಾ ರೂಪಾಂತರವು ಸಕ್ರಿಯವಾಗಿದೆ. ಎರಡನೇ ಅಲೆಯಲ್ಲಿ ಹೇಗೆ ಡೆಲ್ಟಾ ರೂಪಾಂತರ ಲಗಾಮಿಲ್ಲದೆ ಓಡುತ್ತಿತ್ತು, ಅದೇ ರೀತಿ ಒಮಿಕ್ರಾನ್ ಕೂಡ ವೇಗ ಪಡೆದುಕೊಳ್ಳುತ್ತಿದೆ.
ಆದರೆ ಡೆಲ್ಟಾದಿಂದ ಸೃಷ್ಟಿಯಾದ ಪರಿಸ್ಥಿತಿ ಈಗ ಸೃಷ್ಟಿಯಾಗೊಲ್ಲಾ. ಒಮಿಕ್ರಾನ್ ಲಕ್ಷಣಗಳನ್ನ ನೋಡುತ್ತಿದ್ರೆ ಎರಡನೇ ಅಲೆಯಲ್ಲಿ ಅನುಭವಿಸಿದಂತಹ ಗಂಭೀರ ಸಮಸ್ಯೆಗಳು ಇನ್ನೂ ಕಂಡು ಬಂದಿಲ್ಲ, ಡೆಲ್ಟಾ ರೂಪಾಂತರವು ಹೆಚ್ಚು ಅಪಾಯಕಾರಿ ಎಂದು ವೈಜ್ಞಾನಿಕ ಪುರಾವೆಗಳು ಹೇಳುತ್ತವೆ, ಆದರೆ ಒಮಿಕ್ರಾನ್ ಪರಿಸ್ಥಿತಿಯು ತೀವ್ರವಾಗಿಲ್ಲ. ಒಮಿಕ್ರಾನ್ ಸೋಂಕಿಗೆ ಒಳಗಾಗಿದ್ದ ಕೆಲವೇ ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ, ಮತ್ತೆ ಮುಂದೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯು ಕಡಿಮೆ ಹಾಗಾಗಿ ಭಯಪಡುವ ಅಗತ್ಯವಿಲ್ಲ ಎಂದು ಅರೋರ ಹೇಳಿದ್ದಾರೆ.
ಆದರೆ, ವೃದ್ಧರು ಮತ್ತು ವಿವಿಧ ಖಾಯಿಲೆಗಳಿಂದ ಬಳಲುತ್ತಿರುವವರು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಅವರು ಒತ್ತಿ ಹೇಳಿದ್ದಾರೆ. ಇಲ್ಲಿಯವರೆಗೆ, ಹೆಚ್ಚಿನ ಒಮಿಕ್ರಾನ್ ರೋಗಿಗಳನ್ನು ಆಸ್ಪತ್ರೆಗೆ ಸೇರಿಸುವ ಅಗತ್ಯ ಕಂಡು ಬಂದಿಲ್ಲ. ನಾಲ್ಕೈದು ದಿನಗಳಲ್ಲಿ ಉಸಿರಾಟದ ತೊಂದರೆ ಮತ್ತು ನಿರಂತರ ಜ್ವರ ಕಂಡುಬಂದರೆ ಮಾತ್ರ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದೇವೆ. ಈ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿದ್ದವರು ಒಮಿಕ್ರಾನ್ ಸೋಂಕಿಗೆ ಒಳಗಾಗಬಹುದು.
ಇದರಿಂದ ಸುರಕ್ಷಿತವಾಗಿರಲು ಫೇಸ್ ಮಾಸ್ಕ್ ಧರಿಸುವ ಅಗತ್ಯವಿದೆ, ಬಟ್ಟೆಯ ಮಾಸ್ಕ್ ಗಳು ಪರಿಣಾಮಕಾರಿಯಾಗಿಲ್ಲ ಎಂದು ಡಾ ಎನ್ ಕೆ ಅರೋರಾ ವಿವರಿಸಿದ್ದಾರೆ. ಜನ ಒಂದೆಡೆ ಸೇರುವುದನ್ನು ತಪ್ಪಿಸಬೇಕು, ಚುನಾವಣಾ ರ್ಯಾಲಿಗಳು ಮತ್ತು ಮಾರುಕಟ್ಟೆ ಜನಸಂದಣಿಯೆ ದೊಡ್ಡ ಚಿಂತೆಯಾಗಿದೆ ಎಂದು ಡಾ ಎನ್ ಕೆ ಅರೋರಾ ಹೇಳಿದ್ದಾರೆ.