ಮಧ್ಯಪ್ರದೇಶದ ಬಾಂಧವಗರ್ನಲ್ಲಿ ಹೆಣ್ಣು ಹುಲಿಯನ್ನು ಬೇಟೆಗಾರರು ಹತ್ಯೆಗೈದಿರುವ ಘಟನೆ ನಡೆದಿದೆ. ಬಾಂಧವಗರ್ನಲ್ಲಿ ಅತ್ಯಂತ ಸುಂದರ ಹೆಣ್ಣು ಹುಲಿ ಎಂದು ಖ್ಯಾತಿ ಪಡೆದಿತ್ತು. ಬೇಟೆಗಾರರು ಹಾಕಿದ್ದ ವಿದ್ಯುತ್ ಬಲೆಯಲ್ಲಿ ಸಿಲುಕಿ ಹುಲಿ ಸಾವನ್ನಪ್ಪಿದೆ.
ಆರೋಪಿಗಳನ್ನು ಶಿವಕುಮಾರ್, ಕೈಲಾಶ್ ಹಾಗೂ ಬಾಬುಲಾಲ್ ಬೈಗ ಎಂದು ಗುರುತಿಸಲಾಗಿದೆ. ಇವೆರಲ್ಲ ಮಾನ್ಪುರದ ಕಚೋಹಾ ಗ್ರಾಮದ ನಿವಾಸಿಗಳಾಗಿದ್ದಾರೆ.
ಬಾಂಧವಗರ್ ಹುಲಿ ಸಂರಕ್ಷಣಾ ಕ್ಷೇತ್ರದ ನಿರ್ದೇಶಕ ವಿನ್ಸೆಂಟ್ ಈ ವಿಚಾರವಾಗಿ ಮಾತನಾಡಿದ್ದು, ಕಾಡು ಹಂದಿಯನ್ನು ಬೇಟೆಯಾಡುವ ನಿಮಿತ್ತ ಆರೋಪಿಗಳು ಆಗಸ್ಟ್ 27ರ ರಾತ್ರಿ 9 ಗಂಟೆ ಸುಮಾರಿಗೆ 11 -ಕೆವಿ ಲೈನ್ನಿಂದ ವಿದ್ಯುತ್ ಬಲೆ ಅಳವಡಿಸಿದ್ದರು. 2 ಗಂಟೆಗಳ ಬಳಿಕ ಈ ಬಲೆಯಲ್ಲಿ ಹುಲಿ ಬಂದು ಬಿದ್ದಿದೆ ಎಂದು ಹೇಳಿದರು.
ಹುಲಿ ಸತ್ತಿದೆ ಎಂದು ಖಚಿತಪಡಿಸಿಕೊಳ್ಳಲು ಆರೋಪಿಗಳು ಹುಲಿ ಮುಖ ಹಾಗೂ ತಲೆಗೆ ಪದೇ ಪದೇ ಕೊಡಲಿಯಿಂದ ಇರಿದಿದ್ದಾರೆ. ಮಾತ್ರವಲ್ಲದೇ ಹುಲಿಯ ಕೋರೆ ಹಲ್ಲು, ಉಗುರನ್ನು ಕಿತ್ತುಕೊಂಡಿದ್ದಾರೆ. ಬಳಿಕ ಹುಲಿ ಮೃತದೇಹವನ್ನು ಚೀಲದಲ್ಲಿ ತುಂಬಿಸಿ ಅದರೊಳಗೆ ಎರಡು ಕಲ್ಲುಗಳನ್ನು ಇಟ್ಟು ಬಾವಿಗೆ ಎಸೆದಿದ್ದರು.
ಅರಣ್ಯ ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಬೈಗಾ ಬುಡಕಟ್ಟು ಜನಾಂಗದವರು ಆಹಾರಕ್ಕಾಗಿ ಪ್ರಾಣಿಗಳನ್ನು ಬೇಟೆಯಾಡುತ್ತಾರೆ. ಇವರ ಉದ್ದೇಶ ಹುಲಿಯನ್ನು ಸಾಯಿಸುವುದು ಆಗಿರಲಿಲ್ಲ. ಕಾಡು ಹಂದಿಯನ್ನು ಬೇಟೆಯಾಡಲು ಹೋಗಿ ಹುಲಿ ಸತ್ತಿದೆ. ಆದರೂ ಸಹ ಇವರ ಮೇಲೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.