ಡಿಸೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಕಾಶಿ ವಿಶ್ವನಾಥ ದೇಗುಲದ ಕಾರಿಡಾರ್ ಉದ್ಘಾಟನೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾಶಿ ವಿಶ್ವನಾಥ ದೇಗುಲಕ್ಕೆ ತೆರಳುವ ರಸ್ತೆಯಲ್ಲಿರುವ ಮಸೀದಿಗೆ ಅಧಿಕಾರಿಗಳು ಕೇಸರಿ ಬಣ್ಣ ಬಳಿದಿದ್ದಾರೆ ಎಂದು ಮಸೀದಿ ಸಮಿತಿ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.
ಈ ಆರೋಪಕ್ಕೆ ಅಧಿಕಾರಿಗಳು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ರಸ್ತೆ ಬದಿಯಲ್ಲಿರುವ ಎಲ್ಲಾ ಕಟ್ಟಡಗಳಿಗೆ ಒಂದೇ ಬಣ್ಣವನ್ನು ಬಳಿಯಲಾಗುತ್ತಿದೆ. ಇದಕ್ಕಾಗಿ ನಾವು ತಿಳಿ ಗುಲಾಬಿ ಬಣ್ಣವನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಈ ಹಿಂದೆ ಅಧಿಕಾರಿಯೊಬ್ಬರು ಹೇಳಿದ್ದರು.
ಮಸೀದಿ ಸಮಿತಿಯು ಈ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬುಲನಾಲಾ ಪ್ರದೇಶದಲ್ಲಿರುವ ಈ ಮಸೀದಿಗೆ ಪುನಃ ಬಿಳಿ ಬಣ್ಣದಿಂದ ಪೇಂಟಿಂಗ್ ಮಾಡಲಾಗಿದೆ.
ಅಂಜುಮಾನ್ ಇಂತೆಝಾಮಿಯಾ ಸಮಿತಿಯ ಸದಸ್ಯ ಮೊಹಮ್ಮದ್ ಇಜಾಜ್ ಈ ವಿಚಾರವಾಗಿ ಮಾತನಾಡಿದ್ದು , ಮಸೀದಿಯು ಮೊದಲು ಬಿಳಿ ಬಣ್ಣದಲ್ಲೇ ಇತ್ತು. ಆದರೆ ಬಳಿಕ ಇದಕ್ಕೆ ಕೇಸರಿ ಬಣ್ಣ ಬಳಿಯಲಾಗಿದೆ. ಈ ರೀತಿ ಮಾಡುವ ಮುನ್ನ ಅಧಿಕಾರಿಗಳು ಮಸೀದಿ ಸಮಿತಿಯ ಅನುಮತಿ ಪಡೆಯಲಿಲ್ಲ ಎಂದು ಹೇಳಿದ್ದಾರೆ.