ಗರ್ಭಿಣಿ ಮಹಿಳೆಯ ಕುತ್ತಿಗೆಯ ಮೇಲೆ ಗಾಲ್ಫ್ ಬಾಲ್ ಗಾತ್ರದ ಗಡ್ಡೆ ಪತ್ತೆಯಾಗಿದೆ. 24 ವರ್ಷದ ಗರ್ಭಿಣಿಗೆ ಹೊಟ್ಟೆ ತೊಳಸುವುದು, ವಾಂತಿ ಬಂದಂತಾಗುವುದು ಇಂತಹ ಅನೇಕ ಲಕ್ಷಣಗಳಿದ್ದವು. ಐದು ತಿಂಗಳ ಗರ್ಭಿಣಿ ಕೈಟ್ಲಿನ್ ಮೆಕ್‌ಅಲಿಂಡೆನ್ ಆರಂಭದಲ್ಲಿ ಇದು ಗರ್ಭಧಾರಣೆಯ ಸಾಮಾನ್ಯ ಲಕ್ಷಣ ಎಂದು ಭಾವಿಸಿದ್ದರು.
ಆದರೆ ಅವರ ಕುತ್ತಿಗೆಯ ಮೇಲೆ ಗಾಲ್ಫ್ ಬಾಲ್ ಗಾತ್ರದ ಗಡ್ಡೆ ರೂಪುಗೊಂಡ ನಂತರ ವೈದ್ಯರನ್ನು ಸಂಪರ್ಕಿಸಿದ್ದಾರೆ. ಆಗ ಮಾರ್ನಿಂಗ್ ಸಿಕ್‌ನೆಸ್ ಎಂದುಕೊಂಡಿದ್ದ ಬೇನೆಯು ಕ್ಯಾನ್ಸರ್‌ನ ಆರಂಭಿಕ ಲಕ್ಷಣ ಎಂಬುದು ಬೆಳಕಿಗೆ ಬಂದಿದೆ.
ಇಂಗ್ಲೆಂಡ್ ನಿವಾಸಿ ಕೈಟ್ಲಿನ್ ತನ್ನ ಗರ್ಭಾವಸ್ಥೆಯ ಮೊದಲ ಮೂರು ತಿಂಗಳಲ್ಲಿ ವಿಪರೀತ ಆಯಾಸ ಮತ್ತು ವಾಂತಿಯಂತಹ ಸಮಸ್ಯೆಗಳಿಂದ ಬಳಲುತ್ತಿದ್ದಳು. ಈ ರೋಗಲಕ್ಷಣಗಳು ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಕಂಡುಬರುತ್ತವೆ, ಆದ್ದರಿಂದ ಆಕೆ ಹೆಚ್ಚು ಗಮನ ಕೊಡಲಿಲ್ಲ. ಕ್ರಿಸ್‌ಮಸ್ ದಿನದಂದು ಗಂಟಲಿನಲ್ಲಿ ಬಟಾಣಿ ಗಾತ್ರದ ಉಂಡೆಯ ಅನುಭವವಾಯಿತು, ಆಕೆ ಸ್ವಲ್ಪ ತೂಕವನ್ನು ಕಳೆದುಕೊಂಡಿದ್ದಳು. ಆದರೂ ತಕ್ಷಣವೇ ವೈದ್ಯರ ಬಳಿಗೆ ಹೋಗುವ ಬದಲು, ಇದು ಗರ್ಭಧಾರಣೆಯ ಮತ್ತೊಂದು ‘ವಿಚಿತ್ರ’ ಪರಿಣಾಮ ಎಂದು ಪರಿಗಣಿಸಿದ್ದಾಳೆ.
ಮೊದಲ ಹಂತದ ಕ್ಯಾನ್ಸರ್!
2024ರ ಆರಂಭದಲ್ಲಿ ಆಯಾಸವು ಉಲ್ಬಣಗೊಂಡಿತ್ತು, ಗಡ್ಡೆಯು ಗಾಲ್ಫ್ ಚೆಂಡಿನ ಗಾತ್ರಕ್ಕೆ ಬೆಳೆದಿತ್ತು. ವೈದ್ಯರ ತಪಾಸಣೆ ಬಳಿಕ ಮಹಿಳೆಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಇದು ಲಿಂಫೋಮಾದ ಮೊದಲ ಹಂತ.
ಗರ್ಭಾವಸ್ಥೆಯಲ್ಲಿ ಮಾಡುವಂತಿಲ್ಲ ಕೀಮೋಥೆರಪಿ!
ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಕಿಮೋಥೆರಪಿ ಮಾಡುವುದಿಲ್ಲ. ಇದರಿಂದ ಮಗುವಿಗೆ ಹಾನಿಯಾಗಬಹುದು ಅಥವಾ ಗರ್ಭಪಾತಕ್ಕೆ ಕಾರಣವಾಗಬಹುದು. ಮಗುವಿನ ಜನನದ ನಂತರವೂ ಕೆಲವೊಮ್ಮೆ ಕೀಮೋಥೆರಪಿಯನ್ನು ವಿಳಂಬಗೊಳಿಸಬಹುದು. ಹಾಗಾಗಿ ಕೈಟ್ಲಿನ್ ಕೂಡ ಹೆರಿಗೆಯ ನಂತರವೇ ಹೆಚ್ಚಿನ ಚಿಕಿತ್ಸೆ ಪಡೆಯಲಿದ್ದಾಳೆ.