ಸಿಹಿ ತಿನಿಸುಗಳು ಬಹುತೇಕ ಎಲ್ಲರ ಫೇವರಿಟ್. ಆದರೆ ನಮಗಿಷ್ಟ ಬಂದಾಗಲೆಲ್ಲ ವಿಪರೀತ ಸಕ್ಕರೆಯ ತಿಂಡಿಗಳು ಅಥವಾ ಸಿಹಿ ತಿನ್ನುವುದು ಅಪಾಯಕಾರಿ. ಸಿಹಿ ತಿನ್ನಲು ಕೂಡ ಸೂಕ್ತವಾದ ಸಮಯವಿದೆ. ತಪ್ಪಾದ ಸಮಯದಲ್ಲಿ ಸಿಹಿತಿಂಡಿಗಳನ್ನು ಸೇವಿಸಿದರೆ ಅದು ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಅನೇಕರು ಬೆಳಗ್ಗೆ ಎದ್ದ ತಕ್ಷಣ ಸಿಹಿ ತಿನ್ನುತ್ತಾರೆ, ಇನ್ನು ಕೆಲವರು ರಾತ್ರಿ ಮಲಗುವ ಮುನ್ನ ಸಿಹಿತಿಂಡಿಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಂಡಿರುತ್ತಾರೆ.
ಬೆಳಗಿನ ಉಪಾಹಾರವು ದಿನದ ಪ್ರಮುಖ ಊಟ ಎಂದು ಹೇಳಲಾಗುತ್ತದೆ. ಆದರೆ ಬೆಳಿಗ್ಗೆ ಸಿಹಿತಿಂಡಿಗಳನ್ನು ತಿನ್ನುವುದು ಇಡೀ ದಿನವನ್ನು ಹಾಳುಮಾಡುತ್ತದೆ. ಸಿಹಿತಿಂಡಿಗಳು ರಕ್ತದಲ್ಲಿನ ಸಕ್ಕರೆಯನ್ನು ತ್ವರಿತವಾಗಿ ಹೆಚ್ಚಿಸುತ್ತವೆ. ಇದರಿಂದಾಗಿ ಆಯಾಸ, ಕೆರಳಿದ ಭಾವನೆ ಮತ್ತು ಏಕಾಗ್ರತೆಗೆ ತೊಂದರೆ ಅನುಭವಿಸಬಹುದು. ಸಿಹಿ ಆಹಾರವು ಪ್ರೋಟೀನ್, ಫೈಬರ್ ಮತ್ತು ವಿಟಮಿನ್ಗಳಂತಹ ಅಗತ್ಯ ಪೋಷಕಾಂಶಗಳನ್ನು ಹೊಂದಿರುವುದಿಲ್ಲ. ಇದರಿಂದಾಗಿ ದೇಹವು ಸಂಪೂರ್ಣ ಪೋಷಣೆಯನ್ನು ಪಡೆಯುವುದಿಲ್ಲ. ಅಷ್ಟೇ ಅಲ್ಲ ದಿನವಿಡೀ ಸಿಹಿತಿಂಡಿಗಾಗಿ ಹಂಬಲಿಸುವ ಸಾಧ್ಯತೆ ಇರುತ್ತದೆ, ಇದರಿಂದ ತೂಕವೂ ಹೆಚ್ಚಾಗಬಹುದು.
ತಜ್ಞರ ಪ್ರಕಾರ ಸಿಹಿತಿಂಡಿಗಳನ್ನು ಮಧ್ಯಾಹ್ನ ಊಟದ ನಂತರ ತಿನ್ನಬೇಕು. ಇದರಿಂದ ದೇಹಕ್ಕೆ ದಿನವಿಡೀ ಕ್ಯಾಲೊರಿಗಳನ್ನು ಸುಡಲು ಸಮಯ ಸಿಗುತ್ತದೆ. ಊಟವಾಗಿ ಸುಮಾರು ಒಂದು ಗಂಟೆಯ ನಂತರ ಸಿಹಿತಿಂಡಿಗಳನ್ನು ತಿನ್ನಬೇಕು, ಊಟವಾದ ತಕ್ಷಣ ಅದನ್ನು ಸೇವಿಸಿದರೆ ಹೊಟ್ಟೆ ಉಬ್ಬರಿಸುತ್ತದೆ. ಊಟದ ನಂತರ ಸಿಹಿತಿಂಡಿಗಳನ್ನು ತಿಂದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಸ್ಥಿರವಾಗಿರುತ್ತದೆ. ಆಹಾರದಲ್ಲಿನ ಪೋಷಕಾಂಶಗಳ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಸಿಹಿತಿಂಡಿಗಳನ್ನು ತಿಂದ ನಂತರ ಸ್ವಲ್ಪ ವಾಕಿಂಗ್ ಮಾಡುವುದು ಉತ್ತಮ.
ಯಾವ ಸಿಹಿ ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ಕೂಡ ತಿಳಿಯುವುದು ಸೂಕ್ತ. ಸಿಹಿ ಬೇಕೆನಿಸಿದಾಗ ಒಂದು ತುಂಡು ಡಾರ್ಕ್ ಚಾಕೊಲೇಟ್ ಸೇವಿಸಿ. ಇನ್ನು ಚಹಾದ ಅಭ್ಯಾಸವಿರುವವರು ಒಂದು ಕಪ್ ಕುಡಿಯಬಹುದು. ಇವೆರಡೂ ದೇಹಕ್ಕೆ ಹಾನಿಯಾಗದಂತೆ ಸಿಹಿ ರುಚಿಯನ್ನು ನೀಡುತ್ತದೆ. ಬೆಳಗ್ಗೆ ಸಿಹಿ ತಿನಿಸುಗಳ ಬದಲು ಹಣ್ಣು, ಮೊಸರು ಅಥವಾ ಮೊಟ್ಟೆಗಳಂತಹ ಆರೋಗ್ಯಕರ ಆಯ್ಕೆಗಳನ್ನು ಆರಿಸಿಕೊಳ್ಳಿ.