ಇಂಫಾಲ್: ಈಶಾನ್ಯ ರಾಜ್ಯ ಮಣಿಪುರದಲ್ಲಿ ಸಂಘರ್ಷ ಮುಂದುವರೆದಿದೆ. ಬಿಜೆಪಿ ಮುಖಂಡರ ಮನೆಗಳ ಮೇಲೆ ಗುಂಪು ದಾಳಿ ನಡೆಸಲಾಗಿದೆ.
ರಾತ್ರಿ ಹಲವು ಕಡೆ ಉದ್ರಿಕ್ತರ ಗುಂಪು ಬಿಜೆಪಿ ಮುಖಂಡರು, ಶಾಸಕರ ಮನೆಗಳ ಗುರಿಯಾಗಿಸಿಕೊಂಡು ದಾಳಿ ಮಾಡಿದೆ. ಇಂಪಾಲ್ ಸೇರಿದಂತೆ ಹಲವು ಕಡೆಗಳಲ್ಲಿ ಆಸ್ತಿ ಪಾಸ್ತಿಗಳಿಗೆ ಬೆಂಕಿ ಹಚ್ಚಿ ದಾಳಿ ನಡೆಸಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷೆ ಮತ್ತು ಬಿಜೆಪಿ ಶಾಸಕರ ಮನೆಗಳಿಗೆ ನುಗ್ಗಲು ಯತ್ನಿಸಲಾಗಿದೆ. ತಡರಾತ್ರಿ ಬಿಷ್ಣುಪುರ, ಚೂರಚಂದಪುರ ಜಿಲ್ಲೆಯಲ್ಲಿ ಹಿಂಸಾಚಾರ ನಡೆದಿದ್ದು, ಪೊಲೀಸ್ ಠಾಣೆಗಳಿಗೆ ನುಗ್ಗಿ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಲು ದುಷ್ಕರ್ಮಿಗಳು ಯತ್ನಿಸಿದ್ದಾರೆ. ಸಿಆರ್ಪಿಎಫ್ ಮತ್ತು ಪೊಲೀಸರು ಹಲವು ಕಡೆ ಲಾಠಿ ಪ್ರಹಾರ ನಡೆಸಿದ್ದು, ಆಶ್ರುವಾಯು ಸಿಡಿಸಿ ಗುಂಪುಗಳನ್ನು ಚದುರಿಸಲಾಗಿದೆ.
ಇಂಫಾಲ್ ನಲ್ಲಿ ಕೇಂದ್ರ ಸಚಿವರೊಬ್ಬರ ಮನೆಗೆ ಬೆಂಕಿ ಹಚ್ಚಿದ ಒಂದು ದಿನದ ನಂತರ, ಶುಕ್ರವಾರ ರಾತ್ರಿ ಮಣಿಪುರ ಬಿಜೆಪಿ ಅಧ್ಯಕ್ಷೆ ಎ. ಶಾರದಾ ದೇವಿ ಮತ್ತು ರಾಜ್ಯ ಕ್ಯಾಬಿನೆಟ್ ಸಚಿವ ಬಿಸ್ವಜಿತ್ ಸಿಂಗ್ ಅವರ ಮನೆಗಳಿಗೆ ಬೆಂಕಿ ಹಚ್ಚಲು ಪ್ರಯತ್ನಿಸಲಾಯಿತು.
ಪ್ರತ್ಯೇಕ ಘಟನೆಗಳಲ್ಲಿ ಕಣಿವೆಯ ಬಿಷ್ಣುಪುರ್ ಜಿಲ್ಲೆಯ ಗಡಿಯಲ್ಲಿರುವ ಕ್ವಾಕ್ಟಾ ಮತ್ತು ಬೆಟ್ಟಗಳಲ್ಲಿರುವ ಚೂರಚಂದ್‌ಪುರ ಜಿಲ್ಲೆಯ ಕಾಂಗ್ವೈನಲ್ಲಿ ಹಿಂಸಾಚಾರ ನಡೆಸಲಾಗಿದೆ.
ಕಳೆದ ಮೂರು ರಾತ್ರಿಗಳಿಂದ ಉದ್ವಿಗ್ನವಾಗಿರುವ ಇಂಫಾಲ್ ನಲ್ಲಿ ಬಿಜೆಪಿ ಕಚೇರಿ, ಬಿಜೆಪಿ ನಾಯಕರ ನಿವಾಸಗಳು ಮತ್ತು ಪೊಲೀಸ್ ಠಾಣೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ.