
ನವದೆಹಲಿ: ಆಮ್ ಆದ್ಮಿ ಪಕ್ಷದ(ಎಎಪಿ) ನಾಯಕರಿಗೆ ಸಂಕಷ್ಟ ಎದುರಾಗಿದೆ. 1,300 ಕೋಟಿ ರೂ. ಕ್ಲಾಸ್ ರೂಂ ಹಗರಣಕ್ಕೆ ಸಂಬಂಧಿಸಿದಂತೆ ಮನೀಷ್ ಸಿಸೋಡಿಯಾ ಮತ್ತು ಸತ್ಯೇಂದರ್ ಜೈನ್ ವಿರುದ್ಧ ಎಫ್‌ಐಆರ್‌ಗಳನ್ನು ನೋಂದಾಯಿಸಲು ಅಧ್ಯಕ್ಷೆ ದ್ರೌಪದಿ ಮುರ್ಮು ಅನುಮೋದನೆ ನೀಡಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಎಪಿ ಅಧಿಕಾರದಲ್ಲಿದ್ದಾಗ, ಇವರು ಸಚಿವರಾಗಿದ್ದಾಗ ದೆಹಲಿ ಸರ್ಕಾರಿ ಶಾಲೆಗಳಲ್ಲಿ ತರಗತಿ ಕೊಠಡಿಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈ ಹಗರಣ ನಡೆದಿದೆ.
2022 ರಲ್ಲಿ ದೆಹಲಿ ಸರ್ಕಾರದ ವಿಜಿಲೆನ್ಸ್ ನಿರ್ದೇಶನಾಲಯವು ಆಪಾದಿತ ಹಗರಣದ ತನಿಖೆಗೆ ಶಿಫಾರಸು ಮಾಡಿ ಮುಖ್ಯ ಕಾರ್ಯದರ್ಶಿಗೆ ವರದಿಯನ್ನು ಸಲ್ಲಿಸಿತ್ತು.
ಫೆಬ್ರವರಿ 17, 2020 ರಂದು ಕೇಂದ್ರ ವಿಜಿಲೆನ್ಸ್ ಆಯೋಗ(ಸಿವಿಸಿ) ನೀಡಿದ ವರದಿಯಲ್ಲಿ, ಸಾರ್ವಜನಿಕ ಕಾರ್ಯ ಇಲಾಖೆ(ಪಿಡಬ್ಲ್ಯೂಡಿ) ದೆಹಲಿ ಸರ್ಕಾರಿ ಶಾಲೆಗಳಲ್ಲಿ 2,400 ಕ್ಕೂ ಹೆಚ್ಚು ತರಗತಿ ಕೊಠಡಿಗಳ ನಿರ್ಮಾಣದಲ್ಲಿ ಅಕ್ರಮ ನಡೆದ ಬಗ್ಗೆ ತಿಳಿಸಿದೆ.
ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಸಚಿವ ಸತ್ಯೇಂದರ್ ಜೈನ್ ವಿರುದ್ಧ ತನಿಖೆಗೆ ಗೃಹ ಸಚಿವಾಲಯವೂ (MHA) ಅನುಮೋದನೆ ನೀಡಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಇಬ್ಬರ ವಿರುದ್ಧದ ತನಿಖೆಗೆ ಅನುಮೋದನೆ ನೀಡಲಾಗಿದೆ ಎಂದು ಸಚಿವಾಲಯ ಗುರುವಾರ ಲೆಫ್ಟಿನೆಂಟ್ ಗವರ್ನರ್ ಸಚಿವಾಲಯಕ್ಕೆ ತಿಳಿಸಿದೆ.
ಭ್ರಷ್ಟಾಚಾರ ತಡೆ ಕಾಯ್ದೆ, 1988 ರ ಸೆಕ್ಷನ್ 17A ಅಡಿಯಲ್ಲಿ (2018 ರಲ್ಲಿ ತಿದ್ದುಪಡಿ ಮಾಡಿದಂತೆ), ಮಾಜಿ ಪಿಡಬ್ಲ್ಯೂಡಿ ಸಚಿವ ಸತ್ಯೇಂದರ್ ಜೈನ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಲಾಗಿದೆ.