ಜನವರಿ 14 ರ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಸೂರ್ಯ ನಮಸ್ಕಾರ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಲಿದ್ದು, ಒಂದು ಕೋಟಿಗೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂಬ ಭರವಸೆ ಇದೆ ಎಂದು ಆಯುಷ್ ಸಚಿವ ಸರ್ಬಾನಂದ ಸೋನೋವಾಲ್ ಹೇಳಿದ್ದಾರೆ. ಆಯುಷ್ ಸಚಿವಾಲಯವು ಸ್ವಾತಂತ್ರ್ಯದ ಅಮೃತ ಮಹೋತ್ಸವ (ಆಜಾದಿ ಕಾ ಅಮೃತ್ ಮಹೋತ್ಸವ) ಆಚರಣೆಯ ಅಡಿಯಲ್ಲಿ ಮಕರ ಸಂಕ್ರಾಂತಿಯಂದು ಜಾಗತಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಿದೆ ಎಂದು ಅವರು ಇಂದು ನಡೆದ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಕೋವಿಡ್ ನ ಹೊಸ ಅಲೆ ಪ್ರಾರಂಭವಾಗಿದೆ, ಈ ಮಧ್ಯೆ ಸೂರ್ಯ ನಮಸ್ಕಾರ ಅಭ್ಯಸಿಸುವುದು ಅಥವಾ ಕಲಿಯುವುದು ಆರೋಗ್ಯಕ್ಕೆ ಉತ್ತಮ ಎಂದು ಸೋನೊವಾಲ್ ಹೇಳಿದ್ದಾರೆ.
ಸೂರ್ಯ ನಮಸ್ಕಾರ ಮಾಡುವುದರಿಂದ ಚೈತನ್ಯ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಆದ್ದರಿಂದ ಕೊರೊನಾವನ್ನು ನಮ್ಮಿಂದ ದೂರ ಇಡಲು ಸಾಧ್ಯವಾಗುತ್ತದೆ ಎಂದು ಸೋನೊವಾಲ್ ಹೇಳಿದ್ದಾರೆ.
ನಾವು ಈ ಕಾರ್ಯಕ್ರಮದಲ್ಲಿ 75 ಲಕ್ಷ ಜನರು ಭಾಗವಹಿಸುವ ಗುರಿಯನ್ನು ಹೊಂದಿದ್ದೇವೆ, ಆದರೆ ಜನರು ಉತ್ಸಾಹದಿಂದ ನೋಂದಣಿಯಾಗುತ್ತಿರುವುದನ್ನ ನೋಡುತ್ತಿದ್ದರೆ ನಮ್ಮ ಭರವಸೆಗೂ ಮೀರಿ ಜನರು ಭಾಗವಹಿಸಬಹುದು ಎನ್ನಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನ ಮತ್ತು ಮಾರ್ಗದರ್ಶನದಲ್ಲಿ ಆಯುಷ್ ಸಚಿವಾಲಯವು ಈ ಕಾರ್ಯಕ್ರಮವನ್ನು ಪ್ರಾರಂಭಿಸಿದೆ ಎಂದು ಸರ್ಬಾನಂದ್ ತಿಳಿಸಿದ್ದಾರೆ.
ಭಾರತ ಮತ್ತು ವಿದೇಶಗಳ ಪ್ರಮುಖ ಯೋಗ ಸಂಸ್ಥೆಗಳಾದ ಭಾರತೀಯ ಯೋಗ ಅಸೋಸಿಯೇಷನ್, ರಾಷ್ಟ್ರೀಯ ಯೋಗ ಕ್ರೀಡಾ ಒಕ್ಕೂಟ, ಯೋಗ ಪ್ರಮಾಣೀಕರಣ ಮಂಡಳಿ, ಎಫ್‌ಐಟಿ ಇಂಡಿಯಾ, ಜೊತೆಗೆ ಇತರ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಭಾಗವಹಿಸುವವರು ಮತ್ತು ಆಸಕ್ತರು ಆಯಾ ಪೋರ್ಟಲ್‌ಗಳಲ್ಲಿ ತಮ್ಮನ್ನು ನೋಂದಾಯಿಸಿಕೊಂಡು, ಜನವರಿ 14 ರಂದು ಸೂರ್ಯ ನಮಸ್ಕಾರ ಮಾಡುವ ವಿಡಿಯೊಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.