ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದ್ದು, 800ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಹೆಚ್ಐವಿ ಪಾಸಿಟಿವ್ ಬಂದಿದ್ದು, 47 ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ತ್ರಿಪುರಾದಲ್ಲಿ ಬೆಳಕಿಗೆ ಬಂದಿದೆ.
ತ್ರಿಪುರಾ ಸ್ಟೇಟ್ ಏಡ್ಸ್ ಕಂಟ್ರೋಲ್ ಸೊಸೈಟಿ (TSACS) ಜಂಟಿ ನಿರ್ದೇಶಕ ಭಟ್ಟಾಚಾರ್ಜಿ ಈ ಬಗ್ಗೆ ಮಾಹಿತಿ ನೀಡಿದ್ದು, ಅಧ್ಯಯನದಲ್ಲಿ ಈ ಆಘಾತಕಾರಿ ಅಂಶ ಬಯಲಾಗಿದೆ ಎಂದಿದ್ದಾರೆ. ತ್ರಿಪುರಾದ 828 ವಿದ್ಯಾರ್ಥಿಗಳಲ್ಲಿ ಹೆಚ್ಐವಿ ಪಾಸಿಟಿವ್ ಬಂದಿದೆ. 47 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. 572 ಹೆಚ್ ಐವಿ ಸೋಂಕಿತ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಬೇರೆ ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ.
ತ್ರಿಪುರಾದ 220 ಶಾಲೆಗಳು, 24 ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಹೆಚ್ಚಿನದಾಗಿ ಡ್ರಗ್ಸ್ ಇಂಜಕ್ಷನ್ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಹೆಚ್ಐವಿ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಎಲ್ಲಾ ಶಾಲಾ-ಕಲೇಜುಗಳನ್ನು ಪತ್ತೆ ಮಾಡಲಾಗಿದ್ದು, ಹಲವು ವಿದ್ಯಾರ್ಥಿಗಳು ಡ್ರಗ್ ಅಡಿಕ್ಟ್ ಆಗಿದ್ದಾರೆ. ರಾಜ್ಯಾದ್ಯಂತ 164 ಆರೋಗ್ಯ ಕೇಂದ್ರಗಳಿಂದ ಡೇಟಾ ಸಂಗ್ರಹಿಸಿದ್ದೇವೆ ಎಂದು ತಿಳಿಸಿದ್ದಾರೆ.
ಡ್ರಗ್ ಅಡಿಕ್ಟ್ ಆದ ಬಹುತೇಮಕ ಮಕ್ಕಳು ಶ್ರೀಮಂತ ಕುಟುಂಬದಿಂದ ಬಂದವರು. ತಂದೆ-ತಾಯಿ ಇಬ್ಬರೂ ಕೆಲಸದಲ್ಲಿ ಬ್ಯುಸಿ ಇದ್ದಾಗ ಮಕ್ಕಳು ಈ ರೀತಿ ಮಾದಕ ದ್ರವ್ಯಗಳಿಗೆ ಬಲಿಯಾಗುತ್ತಾರೆ. ಮಕ್ಕಳಿಗೆ ಅರಿವು ಮೂಡುವಷ್ಟರಲ್ಲಿ ಅವರು ಮೃತಪಟ್ಟಿರುತ್ತಾರೆ. ತ್ರಿಪುರಾದಲ್ಲಿ 5,674 ಜನರು ಹೆಚ್ ಐವಿ ಪಾಸಿಟಿವ್ ಇದ್ದು, ಅವರಲ್ಲಿ 4570 ಮಂದಿ ಪುರುಷರು, 1103 ಮಂದಿ ಮಹಿಳೆಯರು ಇದ್ದಾರೆ. ಪ್ರತಿ ದಿನ 5-7 ಹೆಚ್ ಐವಿ ಪಾಸಿಟಿವ್ ಕೇಸ್ ದಾಖಲಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ತಿಳಿಸಿದ್ದಾರೆ.