ದೇಶದಲ್ಲಿ ನಿರುದ್ಯೋಗ ಸಮಸ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಎಂಬುದು ಗೊತ್ತಿರುವ ಸಂಗತಿ. ಖಾಸಗಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಲಭ್ಯವಿದ್ದರೂ ಸಹ ಯುವ ಜನತೆ ಕೊನೆ ಕಾಲದವರೆಗೂ ಕೈ ಹಿಡಿಯುತ್ತದೆ ಎಂಬ ಕಾರಣಕ್ಕೆ ಸರ್ಕಾರಿ ಹುದ್ದೆಯನ್ನೇ ಬಯಸುತ್ತಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರಿ ವಲಯದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಸಲು ಆಗುವುದಿಲ್ಲ. ಹೀಗಾಗಿ ‘ಕಾಲ್ ಫಾರ್’ ಮಾಡಿದ ಸ್ವಲ್ಪ ಹುದ್ದೆಗಳಿಗೆ ಲಕ್ಷಾಂತರ ಅರ್ಜಿಗಳು ಸಲ್ಲಿಕೆಯಾಗುತ್ತಿವೆ.
ಹೌದು, ಇತ್ತೀಚೆಗೆ ಕಂದಾಯ ಇಲಾಖೆಯಿಂದ ಕರೆಯಲಾಗಿದ್ದ 1000 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ಬರೋಬ್ಬರಿ 5,70,982 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದ ಸೇರಿ ಒಟ್ಟು 1000 ಹುದ್ದೆಗಳಿಗೆ ನೇರ ನೇಮಕಾತಿ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅರ್ಜಿಗಳನ್ನು ಆಹ್ವಾನಿಸಿತ್ತು. ಇದಕ್ಕೆ 5 ಲಕ್ಷಕ್ಕೂ ಅಧಿಕ ಅರ್ಜಿಗಳು ಬಂದಿವೆ.
ಅರ್ಜಿ ಸಲ್ಲಿಕೆ ಅವಧಿ ಈಗಾಗಲೇ ಮುಕ್ತಾಯಗೊಂಡಿದ್ದು, ಈ ಹುದ್ದೆಗಳಿಗೆ ನೇಮಕವಾಗಲು ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾಭ್ಯಾಸವನ್ನು ನಿಗದಿಪಡಿಸಲಾಗಿತ್ತು. ಎರಡು ಹಂತಗಳಲ್ಲಿ ಪರೀಕ್ಷೆ ನಡೆಯಲಿದ್ದು ಮೊದಲ ಹಂತದ ಪರೀಕ್ಷೆ ಸೆಪ್ಟೆಂಬರ್ 29 ಹಾಗೂ ದ್ವಿತೀಯ ಹಂತದ ಪರೀಕ್ಷೆ ಅಕ್ಟೋಬರ್ 27ರಂದು ಎಲ್ಲ ಜಿಲ್ಲೆಗಳಲ್ಲೂ ನಡೆಯಲಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದಕ್ಕಾಗಿ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.