ಅಬುಜಾ(ನೈಜೀರಿಯಾ): ಆಗ್ನೇಯ ನೈಜೀರಿಯಾದ ಪೋರ್ಟ್ ಹಾರ್ಕೋರ್ಟ್ ನಲ್ಲಿ ಶನಿವಾರ ನಡೆದ ಚರ್ಚ್ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ ಸಂಭವಿಸಿ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಹೆಚ್ಚಿನ ಸಂಖ್ಯೆಯ ಜನ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮತ್ತು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ದುರಂತದಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನವರು ಮಕ್ಕಳಾಗಿದ್ದಾರೆ. ನೈಜೀರಿಯಾದ ಸಿವಿಲ್ ಡಿಫೆನ್ಸ್ ಕಾರ್ಪ್ಸ್ ನ ಪ್ರಾದೇಶಿಕ ವಕ್ತಾರ ಒಲುಫೆಮಿ ಅಯೋಡೆಲೆ ಪ್ರಕಾರ, ಹತ್ತಿರದ ಕಿಂಗ್ಸ್ ಅಸೆಂಬ್ಲಿ ಚರ್ಚ್ ಗಿಫ್ಟ್, ದೇಣಿಗೆ ಅಭಿಯಾನವನ್ನು ಆಯೋಜಿಸಿದ್ದ ಸ್ಥಳೀಯ ಪೋಲೋ ಕ್ಲಬ್ನಲ್ಲಿ ಈ ಘಟನೆ ನಡೆದಿದೆ.
ಉಡುಗೊರೆ ವಿತರಿಸುವ ಪ್ರಕ್ರಿಯೆ ವೇಳೆ ನೂಕುನುಗ್ಗಲು ಉಂಟಾಗಿ ದುರಂತ ಸಂಭವಿಸಿದೆ. ಕಾಲ್ತುಳಿತ ಸಂಭವಿಸಿದಾಗ ಉಡುಗೊರೆ ವಿತರಣೆ ಇನ್ನೂ ಪ್ರಾರಂಭವಾಗಿರಲಿಲ್ಲ. ಗೇಟ್ ಮುಚ್ಚಿದರೂ ಜನಸಮೂಹ ಸ್ಥಳಕ್ಕೆ ನುಗ್ಗಿತು, ಇದು ದುರಂತಕ್ಕೆ ಕಾರಣವಾಗಿದೆ. 30 ಜನ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡ 7 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಾಜ್ಯ ಪೊಲೀಸ್ ವಕ್ತಾರ ಗ್ರೇಸ್ ವೊಯೆಂಗಿಕುರೊ ಇರಿಂಗೆ-ಕೊಕೊ ಹೇಳಿದರು.