ಈ ಬಾರಿ ರಾಜ್ಯಕ್ಕೆ ಮುಂಗಾರು ವಿಳಂಬವಾಗಿ ಪ್ರವೇಶಿಸಿದ್ದು, ಆರಂಭದಲ್ಲಿ ಮಳೆ ಕುಂಠಿತವಾಗಿದ್ದರೂ ಆ ಬಳಿಕ ಅಬ್ಬರಿಸಿತ್ತು. ಇದರ ಪರಿಣಾಮ ಹಳ್ಳ ಕೊಳ್ಳಗಳು, ಕೆರೆಕಟ್ಟೆಗಳು, ಜಲಾಶಯಗಳು ತುಂಬಲಾರಂಭಿಸಿದ್ದವು. ಆದರೆ ಆ ಬಳಿಕ ಮಳೆ ಮತ್ತೆ ಇಳಿಕೆಯಾಗಿತ್ತು.
ಹೀಗಾಗಿ ಈ ಬಾರಿ ಜಲಾಶಯಗಳು ಭರ್ತಿಯಾಗುತ್ತವೋ ಇಲ್ಲವೋ ಎಂಬ ಆತಂಕ ರೈತ ಸಮುದಾಯವನ್ನು ಕಾಡಿದ್ದು, ಆದರೆ ಮಳೆ ಕುರಿತಂತೆ ಹವಾಮಾನ ಇಲಾಖೆ ತಜ್ಞರು ಮಹತ್ವದ ಮಾಹಿತಿ ನೀಡಿದ್ದಾರೆ. ಆಗಸ್ಟ್ ಅಂತ್ಯದವರೆಗೂ ಮಳೆ ಕಣ್ಣಾಮುಚ್ಚಾಲೆ ಆಟ ಮುಂದುವರಿಸಲಿದ್ದು, ಕಡೆ ವಾರದಲ್ಲಿ ವಾಡಿಕೆಗಿಂತ ಅಧಿಕ ಮಳೆ ಸುರಿಯಲಿದೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ನಿರೀಕ್ಷೆಗೂ ಮೀರಿ ಮಳೆ ಸುರಿದ ಪರಿಣಾಮ ರೈತರು ಬೆಳೆದಿದ್ದ ಪೈರು ಕೊಚ್ಚಿಹೋಗಿತ್ತು. ಆದರೆ ಈ ಬಾರಿ ಅಷ್ಟು ಪ್ರಮಾಣದಲ್ಲಿ ಮಳೆ ಸುರಿಯದಿದ್ದರೂ ಸಹ ಆಗಸ್ಟ್ ಕಡೆ ವಾರದಲ್ಲಿ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.