
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮರಾಜಪೇಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿದ್ದಾರೆ.
ಚಾಮರಾಜಪೇಟೆಯ ಮೊರಾರ್ಜಿ ವಸತಿ ಶಾಲೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಹೆಚ್.ಸಿ.ಮಹದೇವಪ್ಪ ದಿಢೀರ್ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿದರು.
ಪಠ್ಯ-ಪುಸ್ತಕ, ವಸತಿ ಶಾಲೆಯ ಊಟದ ವ್ಯವಸ್ಥೆ, ಬಾತ್ ರೂಂ, ಕಿಟ್ ಗಳ ಸಮರ್ಪಕ ವಿತರಣೆ ಆಗುತ್ತಿದೆಯೇ ಎಂಬ ಬಗ್ಗೆ ವಿದ್ಯಾರ್ಥಿಗಳಿಂದಲೇ ಮಾಹಿತಿ ಪಡೆದರು. ಊಟದ ವ್ಯವಸ್ಥೆ ಬಗ್ಗೆ ಸಂತಸ ವ್ಯಕ್ತಪಡಿಸಿದ ವಿದ್ಯಾರ್ಥಿಗಳು, ಬೆಳಗ್ಗೆ ದೋಸೆ, ಮಧ್ಯಾಹ್ನ ಊಟ ಚೆನ್ನಾಗಿರುತ್ತೆ. ಆಗಾಗ ಪಲಾವ್ ಕೊಡ್ತಾರೆ ಎಂದು ತಿಳಿಸಿದ್ದಾರೆ.
ಆರೋಗ್ಯ ತಪಾಸಣೆಗೂ ನಿಯಮಿತವಾಗಿ ವೈದ್ಯರು ಬರುತ್ತಾರೆ ಎಂದು ವಿದ್ಯಾರ್ಥಿಗಳು ವಿವರಿಸಿದ್ದಾರೆ.
ಇದೇ ವೇಳೆ ಸಿಎಂ ಸಿದ್ದರಾಮಯ್ಯ ಮಕ್ಕಳಿಗೆ ಬಸವಣ್ಣನ ವಚನಗಳ ಬಗ್ಗೆ ಮಹತ್ವ ತಿಳಿಸಿದರು. ಅಲ್ಲದೇ ಕನ್ನಡ ವ್ಯಾಕರಣದ ಬಗ್ಗೆಯೂ ಪಾಠ ಮಾಡಿದ್ದಾರೆ.
ಸಂಧಿ ಎಂದರೇನು? ಸಂಧಿಗಳಲ್ಲಿ ಎಷ್ಟು ವಿಧ? ಕನ್ನಡ ಅಕ್ಷರ ಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ? ಯೋಗವಾಹಗಳು ಎಷ್ಟು? ಸ್ವರ ಎಂದರೇನು? ವ್ಯಂಜನಗಳು ಎಂದರೇನು? ಎಷ್ಟಿವೆ? ವರ್ಗೀಯ, ಅವರ್ಗೀಯ ವ್ಯಂಜನಗಳು ಎಷ್ಟಿವೆ? ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು. ವಿದ್ಯಾರ್ಥಿಗಳಿಂದ ಉತ್ತರ ಪಡೆದರು. ಇದೇ ವೇಳೆ ಅಕ್ಷರಗಳು ಎಡಬಿಡದೆ ಸೇರುವುದೇ ಸಂಧಿ ಎಂದು ವ್ಯಾಕರಣದ ಬಗ್ಗೆ ಸಿಎಂ ಪಾಠ ಮಾಡಿದರು.