
ಬೆಂಗಳೂರು: ಹದಿಹರೆಯದಲ್ಲಿ ಹಾದಿ ತಪ್ಪುತ್ತಿರುವ ಮಕ್ಕಳನ್ನು ಸರಿದಾರಿಗೆ ತರಲು ಶಾಲಾ ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ವಿಧಾನಪರಿಷತ್ ನಲ್ಲಿ ಸದಸ್ಯ ಭಾರತೀ ಶೆಟ್ಟಿ ಮಾತನಾಡಿ, ಮಕ್ಕಳಿಗೆ ನೈತಿಕ ಶಿಕ್ಷಣದ ಅಗತ್ಯತೆ ಬಗ್ಗೆ ಪ್ರಸ್ತಾಪಿಸಿದರು.
ದುಶ್ಚಟಗಳಿಗೆ ದಾಸರಾಗುವುದು, ಅಪ್ರಾಪ್ತ ವಯಸ್ಸಿನಲ್ಲಿ ಲೈಂಗಿಕ ಚಟುವಟಿಕೆ, ಗರ್ಭಧಾರಣೆ, ಖಿನ್ನತೆ, ಒತ್ತಡ, ಸೈಬರ್ ವ್ಯಸನ, ಹಿರಿಯರ ಮಾತು ಕೇಳದಿರುವುದು ಸೇರಿದಂತೆ ಹದಿ ಹರಿಯದ ಮಕ್ಕಳು ಎದುರಿಸುತ್ತಿರುವ ಸಮಸ್ಯೆ ಮತ್ತು ಪರಿಹಾರೋಪಾಯಗಳ ಕುರಿತ ವಿಶೇಷ ಚರ್ಚೆಯಲ್ಲಿ ಭಾರತೀ ಶೆಟ್ಟಿ ಮಾತನಾಡಿದರು.
ಸಚಿವ ಮಧು ಬಂಗಾತಪ್ಪ ಮಾತನಾಡಿ, ಶಾಲಾ ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವ ವಿಚಾರ ಚರ್ಚೆಯಲ್ಲಿದೆ. ವಾರದಲ್ಲಿ ಒಂದು ದಿನ ನೈತಿಕ ಶಿಕ್ಷಣ ತರಗತಿ ತೆಗೆದುಕೊಳ್ಳಲು ಅಧಿಕಾರಿಗಳೊಂದಿಗೆ ಶೀಘ್ರದಲ್ಲಿಯೇ ಸಭೆ ನಡೆಸುತ್ತೇವೆ ಎಂದು ತಿಳಿಸಿದರು.
ನೈತಿಕ ಶಿಕ್ಷಣ ನೀಡಲು ಪ್ರತ್ಯೇಕವಾಗಿ ಶಿಕ್ಷಕರು ಬೇಕಾಗುವುದಿಲ್ಲ. ಲಭ್ಯ ಇರುವ ಶಿಕ್ಷಕರ ಮೂಲಕವೇ ನೀಡಬಹುದಾಗಿದ್ದು, ಈ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಿ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.