ಚಿಕ್ಕಮಗಳೂರು: ಪಿಎಸ್ಐ ರವೀಶ್ ಅವರಿಗೆ ಫೋನ್ ಮಾಡಿ ಧಮ್ಕಿ ಹಾಕಿದ ವಿಚಾರವಾಗಿ ಸ್ಪಷ್ಟನೆ ನೀಡಿರುವ ಶಾಸಕ ಎಂ.ಪಿ. ಕುಮಾರಸ್ವಾಮಿ, ಇದು ವಿರೋಧಿಗಳ ಕುತಂತ್ರ, ಬ್ಲ್ಯಾಕ್ ಮೇಲ್ ಮಾಡುವ ತಂತ್ರ ಹೆಣೆದಿದ್ದಾರೆ ಎಂದು ತಿಳಿಸಿದ್ದಾರೆ.
ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಶಾಸಕ ಕುಮಾರಸ್ವಾಮಿ, ಮಲ್ಲಂದೂರು ಪಿಎಸ್ಐ ಅವರೊಂದಿಗೆ ಮಾತುಕತೆ ಆಡಿಯೋ ನನ್ನ ವಿರೋಧಿಗಳು ಮಾಡಿರುವ ಕುತಂತ್ರ. ಹಿಂದೆ ಅದೇ ಪಿಎಸ್ಐ ನನ್ನ ಬಳಿ ಬಂದಿದ್ದರು. ಆ ಸಂದರ್ಭದಲ್ಲಿ ನಾನು ಮಲ್ಲಂದೂರು ವ್ಯಾಪ್ತಿಯಲ್ಲಿ ಬರುವ ಕೂಲಿ ಕಾರ್ಮಿಕರು ಅತ್ಯಂತ ಹಿಂದುಳಿದ ವರ್ಗದ ಜನರು. ನೀವು ಮಂಡ್ಯದವರಾಗಿದ್ದರಿಂದ ಹಾಗೂ ಅನುಭವದ ಕೊರತೆಯಿರುವುದರಿಂದ ಭಾಷೆಯ ವ್ಯತ್ಯಾಸವಿರುತ್ತದೆ. ಇದರಿಂದ ಜನರನ್ನು ಸಂಭಾಳಿಸುವುದು ಕಷ್ಟ ಎಂದು ತಿಳಿಸಿದ್ದೆ. ಅದನ್ನು ಹೊರತುಪಡಿಸಿ ಬೇರೆ ಯಾವ ವಿಚಾರವನ್ನೂ ಕೇಳದೇ ಕಳುಹಿಸಿದ್ದೆ ಎಂದಿದ್ದಾರೆ.
BIG NEWS: ಸಿಎಂ ಆಗಲು 2,500 ಕೋಟಿ ರೂಪಾಯಿ ವಿಚಾರ; ಯತ್ನಾಳ್ ಹೇಳಿಕೆ ಬಗ್ಗೆ ಕೇಸ್ ರಿಜಿಸ್ಟರ್ ಆಗಲಿ; ಡಿ.ಕೆ. ಶಿವಕುಮಾರ್ ಒತ್ತಾಯ
ಇದೀಗ ರವೀಶ್ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ನನ್ನ ಗಮನಕ್ಕೆ ಬಾರದೇ ಕೆಲಸಕ್ಕೆ ಹಾಜರಾಗಿದ್ದು, ಆ ವ್ಯಾಪ್ತಿಯ ನಮ್ಮ ಕಾರ್ಯಕರ್ತರು ಹಾಗೂ ಮತದಾರರು ನನ್ನ ಮೇಲೆ ಒತ್ತಡ ಹಾಕಿದ್ದರಿಂದ ಓರ್ವ ಶಾಸಕನಾಗಿ ನಾನೇ ಮಾತಾನಾಡಬೇಕಿತ್ತು. ಹಾಗಾಗಿ ನಾನು ಮಾತನಾಡಿದೆ. ಏಕೆಂದರೆ ಪೊಲೀಸ್ ಠಾಣೆ ವಿಚಾರವಾಗಿ ನನಗೆ ಪ್ರತಿದಿನ ಹತ್ತಾರು ಕರೆಗಳು ಬರುತ್ತವೆ. ನಾನೇ ಖುದ್ದು ಅದನ್ನು ನಿವಾರಣೆ ಮಾಡಬೇಕಾದ್ದರಿಂದ ಅದು ನನ್ನ ಹೊಣೆಗಾರಿಕೆಯೂ ಆಗಿದೆ.
ಅದನು ಬಿಟ್ಟು ಇದೀಗ ನನ್ನ ವಿರುದ್ಧ ಒಕ್ಕಲಿಗ ವಿರೋಧಿ ಎಂದು ಕುತಂತ್ರ ಹೆಣೆಯುತ್ತಿದ್ದು ಇದು ಸತ್ಯಕ್ಕೆ ದೂರವಾದದ್ದು. ನನ್ನ ಜತೆಗಾರರಲ್ಲಿ ಬಹುತೇಕರು ಒಕ್ಕಲಿಗ ನಾಯಕರೇ ಆಗಿದ್ದಾರೆ. ಆದರೆ ಇದು ನನ್ನ ವಿರುದ್ಧ ನಡೆದಿರುವ ಕುತಂತ್ರವಾಗಿದ್ದು, ಯಾರೂ ನಂಬಬಾರದು ಎಂದು ಹೇಳಿದ್ದಾರೆ.