ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ ಮುಂದುವರೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕೋಡಂಬಟ್ಟುವಿನಲ್ಲಿ ತೋಟದಲ್ಲಿ ಹುಲ್ಲು ಕೊಯ್ಯುವ ಸಂದರ್ಭದಲ್ಲೇ ಮೂವರು ಮಹಿಳೆಯರಿಗೆ ಸಿಡಿಲು ಬಡಿದು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿಕ್ಕಮಗಳೂರು, ತುಮಕೂರು, ಗದಗ, ಕೊಪ್ಪಳ, ಬಳ್ಳಾರಿ, ಉಡುಪಿ, ವಿಜಯನಗರ ಜಿಲ್ಲೆಯ ಹಲವು ಕಡೆ ಮಳೆಯಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಳ್ಳ, ಕೆರೆ, ಕಟ್ಟೆಗಳಿಗೆ ನೀರು ಬಂದಿದೆ. ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಆರಂಭವಾಗಿದೆ.
ರಾಜ್ಯದಲ್ಲಿ ಮುಂಗಾರು ಅಬ್ಬರ ಮುಂದುವರೆಯಲಿದ್ದು, ಇನ್ನೂ ಎರಡು ಮೂರು ದಿನ ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕ, ಕರಾವಳಿ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ರಾಮನಗರ, ತುಮಕೂರು, ಮಂಡ್ಯ, ಬೆಂಗಳೂರು ನಗರ ಸೇರಿ ಹಲವೆಡೆ ಮಳೆಯಾಗಲಿದ್ದು, ಈ ಅವಧಿಯಲ್ಲಿ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹೇಳಲಾಗಿದೆ.