ನವದೆಹಲಿ: ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭವಾಗಲಿದೆ. 17 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಹಲವು ವಿಷಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಜ್ಜಾಗಿದ್ದು, ಅದಕ್ಕೆ ತಿರುಗೇಟು ನೀಡಲು ಕೇಂದ್ರ ಸರ್ಕಾರ ಕೂಡ ಸಜ್ಜಾಗಿದೆ.
ಅಧಿವೇಶನದಲ್ಲಿ ಭಾರಿ ಕೋಲಾಹಲ ಉಂಟಾಗುವ ಸಾಧ್ಯತೆ ಇದೆ. ದೆಹಲಿ ಸುಗ್ರೀವಾಜ್ಞೆ ಸೇರಿದಂತೆ 21 ಮಸೂದೆಗಳನ್ನು ಅಧಿವೇಶನದಲ್ಲಿ ಮಂಡಿಸಲಾಗುವುದು. ಮಣಿಪುರ ಹಿಂಸಾಚಾರ, ಅನೇಕ ರಾಜ್ಯಗಳಲ್ಲಿ ವಿಪಕ್ಷ ನಾಯಕರ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆಗಳ ದಾಳಿ, ಟೊಮೆಟೊ ದರ ಹೆಚ್ಚಳ, ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಹಲವು ವಿಷಯಗಳು ಬಿರುಗಾಳಿ ಎಬ್ಬಿಸುವ ಸಾಧ್ಯತೆ ಇದೆ.
ಹಳೆಯ ಸಂಸತ್ ಭವನದಲ್ಲಿ ಅಧಿವೇಶನ ಆರಂಭವಾಗಿ ನಂತರ ಹೊಸ ಸಂಸತ್ ಭವನದಲ್ಲಿ ಅಧಿವೇಶನ ಮುಂದುವರೆಯಲಿದೆ ಎಂದು ಹೇಳಲಾಗಿದೆ.
ಇನ್ನು ಅಧಿವೇಶನದಲ್ಲಿ ಡಿಜಿಟಲ್ ವೈಯಕ್ತಿಕ ಮಾಹಿತಿ ರಕ್ಷಣಾ ಮಸೂದೆ, ಜೈವಿಕ ವೈವಿಧ್ಯತೆ ಮಸೂದೆ, ಜನ ವಿಶ್ವಾಸ್ ಮಸೂದೆ, ಬಹು ರಾಜ್ಯ ಸಹಕಾರ ಸಂಘಗಳ ಮಸೂದೆ, ಅರಣ್ಯ ಸಂರಕ್ಷಣಾ ತಿದ್ದುಪಡಿ ಮಸೂದೆ ಸೇರಿದಂತೆ ಹಲವು ಮಸೂದೆಗಳನ್ನು ಮಂಡಿಸಲಾಗುವುದು.