ಬೆಂಗಳೂರು: ರಾಜ್ಯಕ್ಕೆ ಮುಂಗಾರು ಆಗಮನದ ಬೆನ್ನಲ್ಲೇ ಮಳೆಯ ಆರ್ಭಟ ಜೋರಾಗಿದೆ. ಹವಾಮಾನ ಇಲಾಖೆ ಸೋಮವಾರ 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಭಾನುವಾರ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಅನೇಕ ಕಡೆ ಅಂಡರ್ ಪಾಸ್ ಸೇರಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಹಲವು ಕಡೆ ಮರಗಳು ಉರುಳಿ ಬಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ಮರಗಳು ಬಿದ್ದು, ಹಲವು ವಾಹನಗಳು ಜಖಂಗೊಂಡಿವೆ.
ಜೂನ್ 3ರಂದು ದಕ್ಷಿಣ ಕನ್ನಡ, ಬಾಗಲಕೋಟೆ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಮಂಡ್ಯ, ಹಾಸನ, ಮೈಸೂರು, ತುಮಕೂರು, ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉಳಿದ ಜಿಲ್ಲೆಗಳಲ್ಲಿಯೂ ವ್ಯಾಪಕ ಮಳೆಯಾಗಲಿದೆ ಎಂದು ಹೇಳಲಾಗಿದೆ.
ಜೂನ್ 4ರಂದು ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಭಾನುವಾರ ಮಂಡ್ಯ ಜಿಲ್ಲೆ ಹೊನಕೆರೆಯಲ್ಲಿ 8 ಸೆ.ಮೀ., ಬೆಂಗಳೂರು ನಗರ ಜಿಕೆವಿಕೆಯಲ್ಲಿ, ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ 6 ಸೆ.ಮೀ., ದೇವನಹಳ್ಳಿಯಲ್ಲಿ 5 ಸೆ.ಮೀ. ಮಳೆಯಾಗಿದೆ.