ಬೆಂಗಳೂರು: ರಾಜ್ಯಕ್ಕೆ ಮುಂಗಾರು ಪ್ರವೇಶ ಒಂದು ವಾರ ವಿಳಂಬವಾಗುವ ಸಾಧ್ಯತೆಯಿದೆ. ಮುಂಗಾರು ಮಳೆ ತರುವ ನೈರುತ್ಯ ಮಾನ್ಸುನ್ ಮಾರುತಗಳು ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿವೆ. ಜೂನ್ ಮೊದಲ ವಾರದ ಕೊನೆಯಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿ ಮಳೆ ಆರಂಭವಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಮಳೆ ಒಂದು ವಾರ ತಡವಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇತ್ತೀಚೆಗಷ್ಟೇ ಅಬ್ಬರಿಸಿದ್ದ ‘ತೌಕ್ತೆ’ ಮತ್ತು ‘ಯಾಸ್’ ಚಂಡಮಾರುತಗಳು ತೇವಾಂಶಭರಿತ ಮೋಡಗಳನ್ನು ಸೆಳೆದುಕೊಂಡಿವೆ. ಇದರ ಕಾರಣದಿಂದಾಗಿ ರಾಜ್ಯದ ಜೂನ್ ಮೊದಲ ವಾರದ ಕೊನೆಗೆ ಮುಂಗಾರು ಪ್ರವೇಶಿಸಲಿದೆ. ಮಾಲ್ಡೀವ್ಸ್ ಗೆ ಮುಂಗಾರು ಮಾರುತಗಳು ಪ್ರವೇಶಿಸಿದ್ದು, ಮೇ 31 ರಂದು ಕೇರಳಕ್ಕೆ ಬರುವ ಸಾಧ್ಯತೆ ಇದೆ. ಮಾರುತಗಳು ಪ್ರಬಲವಾದರೆ ರಾಜ್ಯಕ್ಕೆ ಪ್ರವೇಶಿಸಲಿವೆ. ಒಂದು ವೇಳೆ ದುರ್ಬಲಗೊಂಡರೆ ರಾಜ್ಯದಲ್ಲಿ ಮಳೆ ಬೀಳುವುದು ವಿಳಂಬ ಆಗಬಹುದು ಎಂದು ಹೇಳಲಾಗಿದೆ.