ನವದೆಹಲಿ: ದೇಶದ ಕೃಷಿ ಚಟುವಟಿಕೆ ಮತ್ತು ಆರ್ಥಿಕತೆಯ ಜೀವನಾಡಿ ಎಂದೇ ಹೇಳಲಾಗುವ ಮುಂಗಾರು ಮಾರುತಗಳು ಮೇ 30ರಂದು ಗುರುವಾರ ದೇಶದ ದಕ್ಷಿಣ ತುತ್ತ ತುದಿ ರಾಜ್ಯವಾಗಿರುವ ಕೇರಳ ಪ್ರವೇಶಿಸಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂಗಾರು ಮಾರುತಗಳು ಸಾಮಾನ್ಯವಾಗಿ ಮೇ 31, ಜೂನ್ 1ರ ವೇಳೆಗೆ ಕೇರಳ ಪ್ರವೇಶಿಸಲಿದ್ದು, ನಂತರದ ಒಂದೆರಡು ದಿನಗಳಲ್ಲಿ ಕರ್ನಾಟಕಕ್ಕೆ ಎಂಟ್ರಿ ಕೊಡಲಿವೆ.ನಂತದ 15 ದಿನಗಳಲ್ಲಿ ದೇಶಾದ್ಯಂತ ಮಳೆ ವ್ಯಾಪಿಸುವ ನಿರೀಕ್ಷೆ ಇದೆ. ಈಶಾನ್ಯ ಭಾರತದಲ್ಲಿಯೂ ಮುಂಗಾರು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜೂನ್ -ಸೆಪ್ಟೆಂಬರ್ ಅವಧಿಯಲ್ಲಿ ದೇಶದಲ್ಲಿ ಮಳೆ ಸುರಿಸುವ ಮುಂಗಾರು ಮಾರುತಗಳು ಈ ಬಾರಿ ದೀರ್ಘಕಾಲಿನ ಸರಾಸರಿಗಿಂತ ಹೆಚ್ಚು ಮಳೆ ಸುರಿಸಬಹುದು. ಕರ್ನಾಟಕ ಒಳಗೊಂಡಂತೆ ದಕ್ಷಿಣ ಭಾರತದಲ್ಲಿಯೂ ವಾಡಿಕೆಗಿಂತ ಹೆಚ್ಚಿನ ಮಳೆಯಾಗುತ್ತದೆ ಎನ್ನಲಾಗಿದೆ.