ನವದೆಹಲಿ: ಈ ಬಾರಿ ಮುಂಗಾರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
2024ರ ಮುಂಗಾರು ಋತುವಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಲಿದೆ. ಲಾ ನಿನಾ ಪರಿಣಾಮದಿಂದ ಆಗಸ್ಟ್- ಸೆಪ್ಟೆಂಬರ್ ನಲ್ಲಿ ಉತ್ತಮ ಮುಂಗಾರು ಮಳೆ ಆಗಲಿದೆ ಎಂದು ತಿಳಿಸಿದೆ.
ದೇಶದಲ್ಲೆಡೆ ಎಲ್ಲಾ ಪ್ರಾದೇಶಿಕ ಸ್ಥಳಗಳಲ್ಲಿ ಒಂದೇ ರೀತಿಯ ಮಳೆ ಆಗುವ ಸಂಭವವಿದೆ ಎಂದು ಹೇಳಲು ಆಗದು. ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯೂ ತಾತ್ಕಾಲಿಕವಾಗಿರುತ್ತದೆ. ಹವಾಮಾನ ಬದಲಾವಣೆಯಿಂದ ಅನೇಕ ಕಡೆ ಮಳೆ ಪ್ರಮಾಣದಲ್ಲಿ ಏರಿಳಿತವಾಗಬಹುದು. ಹವಾಮಾನ ತಜ್ಞರ ಪ್ರಕಾರ ಮಳೆಯಾಗುವ ದಿನಗಳು ಕಡಿಮೆಯಾಗುವ ಸಾಧ್ಯತೆ ಇದೆ.
1951 ರಿಂದ 2023ರ ನಡುವಿನ ದತ್ತಾಂಶದ ಆಧಾರದ ಮೇಲೆ ಭಾರತ ಎಲ್ ನಿನೊ ಸಂಭವಿಸಿದ ನಂತರ 9 ಅವಧಿಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಕಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುಖ್ಯಸ್ಥ ಮೃತ್ಯುಂಜಯ ಮೊಹಾಪಾತ್ರ ತಿಳಿಸಿದ್ದಾರೆ.
ಜೂನ್ ನಿಂದ ಸೆಪ್ಟಂಬರ್ ನಲ್ಲಿ ಭಾರತದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಅಂದರೆ 106ರಷ್ಟು ಮಳೆ ಆಗಲಿದೆ ಎಂದು ಹೇಳಲಾಗಿದೆ.