ಬೆಂಗಳೂರು: ನೈರುತ್ಯ ಮುಂಗಾರು ಮಾರುತಗಳು ರಾಜ್ಯಕ್ಕೆ ಪ್ರವೇಶಿಸಿ ತಿಂಗಳು ಕಳೆದರೂ ಮಳೆ ಕುಂಠಿತವಾಗಿದೆ. ವಾಡಿಕೆಯಂತೆ 190 ಮಿ.ಮೀ ಮಳೆಯಾಗಬೇಕಿತ್ತು. ಆದರೆ, 145 ಮಿಮೀ ಮಳೆಯಾಗಿ ರಾಜ್ಯದಲ್ಲಿ ಶೇಕಡ 24 ರಷ್ಟು ಮಳೆ ಕುಂಠಿತವಾಗಿದೆ.
ರಾಜ್ಯದ ಬಹುತೇಕ ಭಾಗದಲ್ಲಿ ರೈತರು ಬಿತ್ತನೆಗೆ ಜಮೀನು ಸಿದ್ಧಪಡಿಸಿಕೊಂಡು ಮಳೆಗಾಗಿ ಕಾಯುತ್ತಿದ್ದಾರೆ. ಇನ್ನು ಹಲವು ಕಡೆಗಳಲ್ಲಿ ಬಿತ್ತನೆ ಮಾಡಿದ ಬೀಜಗಳು ಮೊಳಕೆಯೊಡೆಯುತ್ತಿವೆ. ಮಳೆ ಇನ್ನೊಂದು ವಾರ ಬರೆದಿದ್ದರೆ ಭೆಳೆ ಒಣಗುವ ಆತಂಕ ಎದುರಾಗಿದೆ. ಹೀಗಾಗಿ ರೈತರು ಮಳೆಯ ನಿರೀಕ್ಷೆಯಲ್ಲಿದ್ದಾರೆ. ರಾಜ್ಯದ ಹಲವು ಭಾಗದಲ್ಲಿ ಮಳೆ ಕೊರತೆ ಕಂಡುಬಂದಿದೆ ಎನ್ನಲಾಗಿದೆ.
ಕರಾವಳಿ ಸೇರಿದಂತೆ ಹಲವಡೆ ಸುರಿಯುತ್ತಿರುವ ಮಳೆ ಮುಂದಿನ ನಾಲ್ಕು ದಿನಗಳ ಕಾಲ ಮುಂದುವರಿಯಲಿದೆ. ಇವತ್ತು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ನಾಳೆಯಿಂದ ಮೂರು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇದೇ ವೇಳೆ ದಕ್ಷಿಣ ಒಳನಾಡು, ಉತ್ತರ ಒಳನಾಡು, ಮಲೆನಾಡು ಭಾಗದಲ್ಲಿ 4 ದಿನ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.