ಬೆಂಗಳೂರು: ರಾಜ್ಯದಲ್ಲಿ ಮುಂಗಾರು ವಿಳಂಬವಾಗಿದ್ದರೂ, ರೈತರಿಗೆ ಆತಂಕ ಬೇಡ. ವಾಡಿಕೆಯಷ್ಟು ಮುಂಗಾರು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪ್ರಸಕ್ತ ವರ್ಷದಲ್ಲಿ ಇದುವರೆಗೆ ವಾಡಿಕೆಗಿಂತ ಕಡಿಮೆ ಮಳೆ ಬಿದ್ದಿದೆ. ಜೂನ್ ನಿಂದ ಸೆಪ್ಟಂಬರ್ ವರೆಗಿನ ಮುಂಗಾರು ಅವಧಿಯಲ್ಲಿ ವಾಡಿಕೆಯಷ್ಟು ಮಳೆಯಾಗಲಿದೆ ಎಂದು ಹೇಳಲಾಗಿದೆ. ಒಂದು ವಾರ ತಡವಾಗಿ ನೈರುತ್ಯ ಮುಂಗಾರು ಆಗಮನವಾಗಿದ್ದರೂ, ಕೃಷಿ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಉಂಟಾಗುವುದಿಲ್ಲ. ಮುಂದಿನ ವಾರಗಳಲ್ಲಿ ರಾಜ್ಯದಲ್ಲಿ ಮಳೆ ಚುರುಕುಗೊಳ್ಳಲಿದ್ದು, ಬಿತ್ತನೆ ಕಾರ್ಯ, ಕೃಷಿ ಚಟುವಟಿಕೆಗಳು ಬಿರುಸುಗೊಳ್ಳಲಿವೆ.
ಮುಂಗಾರು ವಿಳಂಬವಾಗಿದ್ದರೂ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಪೂರ್ವ ಮುಂಗಾರಿನಲ್ಲಿ ಜನವರಿಯಿಂದ ಮೇ ತಿಂಗಳವರೆಗೆ ವಾಡಿಕೆಯ ಪ್ರಕಾರ 129 ಮಿಲಿ ಮೀಟರ್ ಮಳೆಯಾಗಬೇಕಿದ್ದು, ಬದಲಿಗೆ ಕೇವಲ 116 ಮಿಲಿ ಮೀಟರ್ ಮಳೆಯಾಗಿದೆ. ರಾಷ್ಟ್ರೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ರಾಜ್ಯದಲ್ಲಿ ಶೇಕಡ 96 ರಷ್ಟು ಮಳೆ ಬರುವ ಸಾಧ್ಯತೆ ಇದೆ. ಉತ್ತರ ಒಳನಾಡು, ಘಟ್ಟ ಪ್ರದೇಶಗಳಲ್ಲಿ ಸರಾಸರಿಗಿಂತ ಹೆಚ್ಚಿನ ಮುಂಗಾರು ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.