ಉಡುಪಿ: ಜೂನ್ 1 ರಿಂದ ಜುಲೈ 31ರವರೆಗೆ ಮುಂಗಾರು ಯಾಂತ್ರೀಕೃತ ಮೀನುಗಾರಿಕೆ ನಿಷೇಧಿಸಲಾಗಿದೆ. ಸರ್ಕಾರದಿಂದ ಈ ಕುರಿತು ಆದೇಶ ಹೊರಡಿಸಿದ್ದು, ಕರಾವಳಿ ಅರಬ್ಬೀ ಸಮುದ್ರದಲ್ಲಿ 61 ದಿನಗಳ ಕಾಲ 10 ಹೆಚ್.ಪಿ. ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಇನ್ ಬೋರ್ಡ್ ಅಥವಾ ಔಟ್ ಬೋರ್ಡ್ ಇಂಜಿನ್ ಅಳವಡಿಸಿರುವ ದೋಣಿಗಳಲ್ಲಿ ಮೀನುಗಾರಿಕೆ ನಡೆಸುವಂತಿಲ್ಲ.
10 ಹೆಚ್.ಪಿ.ಯೊಳಗಿನ ಮೋಟಾರ್ ದೋಣಿ, ಸಾಂಪ್ರದಾಯಿಕ, ನಾಡ ದೋಣಿಗಳ ಮೂಲಕ ಮೀನುಗಾರಿಕೆಗೆ ಅವಕಾಶ ಇದೆ. ಮಳೆಗಾಲದಲ್ಲಿ ಸಮುದ್ರ ತೀವ್ರ ಪ್ರಕ್ಷುಬ್ಧವಾಗುವ ಕಾರಣ ಮೀನುಗಾರರ ಪ್ರಾಣ ಮತ್ತು ದೋಣಿಗಳಿಗೆ ಅಪಾಯವಾಗುವ ಸಂಭವ ಇರುತ್ತದೆ. ಸಮುದ್ರದಲ್ಲಿ ಮೀನುಗಳು ಮೊಟ್ಟೆ ಇಡುವ ಕಾಲವಾಗಿರುವುದರಿಂದ ಸಂತಾನೋತ್ಪತ್ತಿಗೆ ತೊಂದರೆಯಾಗದಂತೆ ಪ್ರತಿ ವರ್ಷ ಎರಡು ತಿಂಗಳು ಮೀನುಗಾರಿಕೆ ನಿಷೇಧಿಸಲಾಗುತ್ತದೆ. ಜೂನ್ 1 ರಿಂದ 61 ದಿನ ಮುಂಗಾರು ಯಾಂತ್ರೀಕೃತ ಮೀನುಗಾರಿಕೆ ನಿಷೇಧಿಸಲಾಗಿದೆ.