ನವದೆಹಲಿ: ಈ ಬಾರಿ ತಡವಾಗಿ ಪ್ರವೇಶಿಸಿದ ಮುಂಗಾರು ಮಾರುತಗಳು ಜುಲೈ 6 ರವರೆಗೆ ದುರ್ಬಲವಾಗಿರುತ್ತವೆ ಎಂದು ಭಾರತೀಯ ಹವಾಮಾನ ಇಲಾಖೆ ಮತ್ತು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೇಟ್ ವೆದರ್ ಮುನ್ಸೂಚನೆ ನೀಡಿವೆ.
ಜುಲೈ 6ರವರೆಗೆ ದೇಶದ ವಿವಿಧ ಭಾಗಗಳಲ್ಲಿ ಕಡಿಮೆ ಪ್ರಮಾಣದ ಮಳೆಯಾಗುತ್ತದೆ. ನಂತರ ಮುಂಗಾರು ಚುರುಕಾಗುತ್ತದೆ ಎಂದು ಹೇಳಲಾಗಿದೆ. ಜುಲೈ 6 ರವರೆಗೆ ಮಧ್ಯ ಭಾರತ, ವಾಯುವ್ಯ ಭಾರತದ ಬಹುತೇಕ ಭಾಗಗಳು ತೀವ್ರ ಶುಷ್ಕ ಪ್ರದೇಶವಾಗಿರುತ್ತವೆ ಎಂದು ಸ್ಕೈ ಮೇಟ್ ಸಂಸ್ಥೆ ಹೇಳಿದೆ.
ಬಿತ್ತನೆಯ ಸಮಯ ಇದಾಗಿದ್ದು, ರೈತರಿಗೆ ಮಳೆ ಅಗತ್ಯವಾಗಿದೆ. ಆದರೆ, ಮಳೆಯಾಗದ ಕಾರಣ ರೈತರಿಗೆ ಸಂಕಷ್ಟ ಎದುರಾಗಿದೆ. ಜೂನ್ 1 ರಿಂದ ಶೇಕಡ 54 ರಷ್ಟು ಮಳೆ ಕೊರತೆಯನ್ನು ಭಾರತ ಎದುರಿಸುತ್ತಿದೆ. ದಕ್ಷಿಣ ಭಾರತದಲ್ಲಿ ಶೇಕಡ 53 ರಷ್ಟು, ಮಧ್ಯ ಭಾರತದಲ್ಲಿ ಶೇಕಡ 80 ರಷ್ಟು, ಈಶಾನ್ಯ ಮತ್ತು ಪೂರ್ವ ಭಾರತದಲ್ಲಿ ಶೇಕಡ 53 ರಷ್ಟು, ವಾಯುವ್ಯ ಭಾರತದಲ್ಲಿ ಶೇಕಡ 10ರಷ್ಟು ಮಳೆ ಕೊರತೆ ಆಗಿದೆ. ಜುಲೈ 6ರವರೆಗೂ ದುರ್ಬಲವಾಗಿರುವ ಮುಂಗಾರು ಮಾರುತಗಳು ನಂತರ ಚುರುಕಾಗುತ್ತವೆ ಎಂದು ಹೇಳಲಾಗಿದೆ.