ಬೆಂಗಳೂರು: ಶೇಕಡ 25ರಷ್ಟು ಮಳೆ ಕೊರತೆಯೊಂದಿಗೆ ಮುಂಗಾರು ಅಂತ್ಯವಾಗಿದೆ. ವಾಡಿಕೆಯ 85.2 ಸೆ.ಮೀ. ಬದಲಿಗೆ 63.5 ಸೆ.ಮೀ.ನಷ್ಟು ಮುಂಗಾರು ಮಳೆಯಾಗಿದೆ. 10 ವರ್ಷದಲ್ಲೇ ತೀವ್ರ ಮಳೆ ಕೊರತೆಗೆ ರಾಜ್ಯ ಸಾಕ್ಷಿಯಾಗಿದೆ.
ಜೂನ್ 1ರಿಂದ ಸೆಪ್ಟೆಂಬರ್ 30ರ ಅವಧಿಯನ್ನು ಮುಂಗಾರು ಅವಧಿ ಎಂದು ಪರಿಗಣಿಸಲಾಗುವುದು. ಜೂನ್ ನಿಂದ ಸೆಪ್ಟಂಬರ್ ವರೆಗೆ ರಾಜ್ಯದಲ್ಲಿ ವಾಡಿಕೆಯಷ್ಟು ಮಳೆಯಾಗದೇ ಶೇಕಡ 25ರಷ್ಟು ಮಳೆ ಕೊರತೆಯಾಗಿದೆ. ಜೂನ್ ಮೊದಲ ವಾರ ಅರಬ್ಬಿಸಮುದ್ರದಲ್ಲಿ ಬಿಪರ್ ಜಾಯ್ ಚಂಡಮಾರುತದ ಪರಿಣಾಮ ಮುಂಗಾರು ದುರ್ಬಲವಾಗಿತ್ತು. ಹೀಗಾಗಿ ಒಂದು ವಾರ ಮಳೆ ವಿಳಂಬವಾಗಿತ್ತು. ಆದರೆ ತಡವಾಗಿ ಪ್ರವೇಶಿಸಿದ ಮುಂಗಾರು ಚುರುಕುಗೊಳ್ಳಲಿಲ್ಲ. ಮಳೆ ಕೊರತೆ ಮುಂದುವರೆದು ರಾಜ್ಯದಲ್ಲಿ 100ಕ್ಕೂ ಅಧಿಕ ತಾಲೂಕುಗಳಲ್ಲಿ ಬರ ಪರಿಸ್ಥಿತಿ ಎದುರಾಗಿದೆ.
ಕಳೆದ ಒಂದು ದಶಕದ ಅವಧಿಯಲ್ಲಿ ಈ ವರ್ಷ ಭಾರಿ ಮಳೆ ಕೊರತೆ ಕಂಡು ಬಂದಿದೆ. 53 ವರ್ಷಗಳಲ್ಲೇ ಮೂರನೇ ಅತ್ಯಧಿಕ ಮಳೆ ಕೊರತೆ ಇದಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಮಳೆ ಕೊರತೆಯಾಗಿದೆ. ವಾಡಿಕೆಯಷ್ಟು ಮಳೆಯಾಗಿಲ್ಲ. ಶೇಕಡ 25ರಷ್ಟು ಮಳೆ ಕೊರತೆಯೊಂದಿಗೆ ಮುಂಗಾರು ಅಂತ್ಯವಾಗಿದ್ದು, ಹಿಂಗಾರು ಮೇಲೆ ನಿರೀಕ್ಷೆ ಇದೆ.