ಕೊರೊನಾ ವೈರಸ್ ವಿರುದ್ಧದ ಹೋರಾಟ ಮುಂದುವರೆದಿದೆ. ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬರ್ತಿದೆ. ಕೊರೊನಾ ವೈರಸ್ ನಿಯಂತ್ರಣಕ್ಕೆ ಪ್ರತಿ ದಿನ ಒಂದೊಂದು ಅಧ್ಯಯನ ನಡೆಯುತ್ತಿದೆ. ಕೊರೊನಾ ಚಿಕಿತ್ಸೆಗೆ ಪರಿಣಾಮಕಾರಿ ಎಂದು ಹೇಳಲಾಗುವ ಮೊನೊಕ್ಲೋನಲ್ ಆಂಟಿಬಾಡಿ ಚಿಕಿತ್ಸೆಯ ಬಳಕೆ ಈಗ ಭಾರತದಲ್ಲಿ ಶುರುವಾಗಿದೆ. ಇದ್ರ ಆರಂಭಿಕ ಫಲಿತಾಂಶ ಆಶಾದಾಯಕವಾಗಿದೆ.
ಗಂಗಾರಾಮ್ ಆಸ್ಪತ್ರೆಯಲ್ಲಿ ಇಬ್ಬರು ಕೊರೊನಾ ರೋಗಿಗಳಿಗೆ ಇದ್ರ ಚಿಕಿತ್ಸೆ ನೀಡಲಾಗಿದೆ. ವೈದ್ಯರ ಪ್ರಕಾರ ಮೊನೊಕ್ಲೋನಲ್ ಆಂಟಿಬಾಡಿ ಚಿಕಿತ್ಸೆಯು ಕೋವಿಡ್ -19 ರ ಇಬ್ಬರು ರೋಗಿಗಳ ಆರೋಗ್ಯವನ್ನು 12 ಗಂಟೆಗಳಲ್ಲಿ ಗಮನಾರ್ಹವಾಗಿ ಸುಧಾರಿಸಿದೆ. 36 ವರ್ಷದ ಆರೋಗ್ಯ ಕಾರ್ಯಕರ್ತ ತೀವ್ರ ಜ್ವರ, ಕೆಮ್ಮು, ಸ್ನಾಯು ನೋವು, ದೌರ್ಬಲ್ಯ ಮತ್ತು ಬಿಳಿ ರಕ್ತ ಕಣಗಳ ಕೊರತೆಯಿಂದ ಬಳಲುತ್ತಿದ್ದ. ಅನಾರೋಗ್ಯದ ಆರನೇ ದಿನವಾದ ಮಂಗಳವಾರ ಅವರಿಗೆ ಮೊನೊಕ್ಲೋನಲ್ ಆಂಟಿಬಾಡಿ ಕಾಕ್ಟೈಲ್ ನೀಡಲಾಯಿತು. ಈ ಚಿಕಿತ್ಸೆ ನೀಡಿ 8 ಗಂಟೆಯಲ್ಲೇ ಆತನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ವೈದ್ಯರು ಹೇಳಿದ್ದಾರೆ.
ಸರಿಯಾದ ಸಮಯದಲ್ಲಿ ಮೊನೊಕ್ಲೋನಲ್ ಆಂಟಿಬಾಡಿ ಚಿಕಿತ್ಸೆ ಸಿಕ್ಕಲ್ಲಿ ಆರೋಗ್ಯದಲ್ಲಿ ಬಹುಬೇಗ ಚೇತರಿಕೆ ಕಾಣಬಹುದು. ಈ ಚಿಕಿತ್ಸೆ ನೀಡಿದಲ್ಲಿ ಸ್ಟೀರಾಯ್ಡ್ ಗಳು ಅಥವಾ ಇಮ್ಯುನೊಮಾಡ್ಯುಲೇಷನ್ ಬಳಕೆಯನ್ನು ಕಡಿಮೆ ಮಾಡಬಹುದು ಎಂದು ವೈದ್ಯರು ಹೇಳಿದ್ದಾರೆ.