ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಮಂಗನ ಕಾಯಿಲೆ ಹೆಚ್ಚುತ್ತಿದ್ದು, ಜನರು ಹೈರಾಣಾಗಿದ್ದಾರೆ. ಕಳೆದ 10 ದಿನಗಳಲ್ಲಿ 21 ಜನರಲ್ಲಿ ಸೋಂಕು ಪತ್ತೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಅತಿ ಹೆಚ್ಚು ಮಂಗನ ಕಾಯಿಲೆ ಪ್ರಕರಣ ಪತ್ತೆಯಾಗಿದೆ. ಬಿಸಿಲು ಹೆಚ್ಚಾದಂತೆ ಕಾಯಿಲೆ ಹೆಚ್ಚುವ ಆತಂಕ ಎದುರಾಗಿದೆ. ಸೋಂಕು ತಡೆಗಟ್ಟಲು ಆರೋಗ್ಯ ಇಲಾಖೆ ಬಳಿ ರೋಗ ನಿರೋಧಕ ಔಷಧಿ ಕೊರತೆ ಎದುರಾಗಿದ್ದು, ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.
ಕಳೆದ ಹತ್ತು ದಿನಗಳಲ್ಲಿ 21 ಜನರು ಮಂಗನ ಕಾಯಿಲೆಯಿಂದ ಬಳಲುತ್ತಿದ್ದು, 8 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಲ್ಲಿ ಇಬ್ಬರನ್ನು ಮಣಿಪಾಲ್ ಆಸ್ಪತೆಗೆ ದಾಖಲಿಸಲಾಗಿದೆ. 6 ಜನ ಸಿದ್ದಾಪುರ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. 13 ಜನರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎರಡನೇ ಬಾರಿ ಮಂಗನ ಕಾಯಿಲೆಗೆ ತುತ್ತಾದರೆ ಜ್ವರ ಹೆಚ್ಚಾಗಿ ರಕ್ತಸ್ರಾವವಾಗುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಜನರು ಮುಂಜಾಗೃತೆ ವಹಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜ್ ತಿಳಿಸಿದ್ದಾರೆ.