ಹೊಸ ಸಂಸತ್ ಭವನದಲ್ಲಿ ಮಳೆ ನೀರು ಸೋರಿಕೆ ವಿಚಾರ ಕುರಿತು ಗದ್ದಲದ ನಡುವೆ, ಶುಕ್ರವಾರ ನವದೆಹಲಿಯ ಸಂಸತ್ ಆವರಣಕ್ಕೆ ಕೋತಿ ಪ್ರವೇಶಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ಮುಂದುವರೆಸಿದೆ.
ಸಂಸದರಿಗೆ ಮೀಸಲಾದ ಸಂಸತ್ ಭವನದ ಲಾಬಿಯೊಳಗೆ ಕೋತಿಯೊಂದು ಓಡಾಡುತ್ತಿರುವ ವಿಡಿಯೋವನ್ನು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹಂಚಿಕೊಂಡಿದ್ದಾರೆ.
“ನ್ಯೂ ಪಾರ್ಲಿಮೆಂಟ್ ಬಿಲ್ಡಿಂಗ್ ಎಂದೂ ಕರೆಯಲ್ಪಡುವ ಮೋದಿಮ್ಯಾರಿಯಟ್‌ನಲ್ಲಿ ಇಂದು ಮಂಕಿ ಬಾತ್” ಎಂದು ಅವರು ಎಂಟು ಸೆಕೆಂಡುಗಳ ವೀಡಿಯೊವನ್ನ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ ನಾಯಕ ರಾಜೀವ್ ರೆಡ್ಡಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಕೋತಿಯ ಮತ್ತೊಂದು ವೀಡಿಯೊವನ್ನು ಹಂಚಿಕೊಂಡು “ಒಂದು ಮಂಗ ಮಳೆನೀರಲ್ಲಿ ಮುಳುಗುತ್ತಿರುವ ದೆಹಲಿಯಲ್ಲಿ ತನ್ನನ್ನು ರಕ್ಷಿಸಿಕೊಳ್ಳಲು ಸಂಸತ್ತನ್ನು ತಲುಪಿತು, ಆದರೆ ಸಂಸತ್ತಿನಲ್ಲಿ ಮಳೆನೀರು ಸೋರಿಕೆಯನ್ನು ಕಂಡಿತು” ಎಂದು ವ್ಯಂಗ್ಯವಾಗಿ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಹೊಸ ಸಂಸತ್ ಕಟ್ಟಡದಲ್ಲಿ ನೀರು ಸೋರಿಕೆಯ ದೃಶ್ಯಗಳೊಂದಿಗೆ ಬಿಜೆಪಿ ಸರ್ಕಾರವನ್ನು ಗುರಿಯಾಗಿಸಿದ ಎರಡು ದಿನಗಳ ನಂತರ ವೀಡಿಯೊ ಬಂದಿದೆ.