ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ ಮಗು ಹುಟ್ಟಿದ್ದಕ್ಕೆ ಹಣ ಕೊಡಿ ಎಂದು ಬೇಡಿಕೆ ಇಟ್ಟಿದ್ದ ಇಬ್ಬರು ನರ್ಸ್ ಗಳನ್ನು ಅಮಾನತು ಮಾಡಲಾಗಿದೆ.
ಭದ್ರಾವತಿ ತಾಲೂಕಿನ ಮಹಿಳೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಅವರ ಕುಟುಂಬದವರಿಂದ 1500 ರೂ. ಕೊಡುವಂತೆ ಹೊರಗುತ್ತಿಗೆ ನರ್ಸ್ ಗಳಿಬ್ಬರು ಬೇಡಿಕೆ ಇಟ್ಟಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಗಂಡು ಮಗು ಜನಿಸಿದರೆ 2000 ರೂ., ಹೆಣ್ಣು ಮಗು ಹುಟ್ಟಿದರೆ 1,500 ರೂ.ಗಳನ್ನು ಕುಟುಂಬದವರು ಅಥವಾ ಸಂಬಂಧಿಕರ ಬಳಿ ನರ್ಸ್ ಗಳು ಪಡೆದುಕೊಳ್ಳುತ್ತಾರೆ.
ಇದೇ ರೀತಿ ಭದ್ರಾವತಿ ತಾಲೂಕಿನ ಮಹಿಳೆಯ ಕುಟುಂಬದವರ ಬಳಿ 1500 ರೂ. ಕೇಳಿದಾಗ ಅವರು 600 ಕೊಡಲು ಹೋಗಿದ್ದಾರೆ. ಆದರೆ, ಅದನ್ನು ತೆಗೆದುಕೊಳ್ಳದೆ 1500 ರೂ. ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಕುಟುಂಬದವರು ಮೆಗ್ಗಾನ್ ಆಸ್ಪತ್ರೆಯ ವೈದ್ಯಕೀಯ ಅಧ್ಯಕ್ಷಕ ಡಾ. ಶ್ರೀಧರ್ ಅವರಿಗೆ ಈ ಬಗ್ಗೆ ದೂರು ನೀಡಿದ್ದು, ಅವರು ಪರಿಶೀಲನೆ ನಡೆಸಿ ಹಣ ಕೇಳಿರುವುದನ್ನು ದೃಢಪಡಿಸಿಕೊಂಡು ಹೊರಗುತ್ತಿಗೆ ನರ್ಸ್ ಗಳಿಬ್ಬರನ್ನೂ ಅಮಾನತು ಮಾಡಿದ್ದಾರೆ.