ಹಣ ಉಳಿತಾಯ, ಎಫ್ ಡಿ, ಉಳಿತಾಯ ಖಾತೆ ವಿಷ್ಯ ಬಂದಾಗ ನಾವು ದೊಡ್ಡ ಬ್ಯಾಂಕ್ ಗಳಿಗೆ ಹೋಗ್ತೇವೆ. ಆದ್ರೆ ದೊಡ್ಡ ಬ್ಯಾಂಕ್ ಗಿಂತ ಸಣ್ಣ ಬ್ಯಾಂಕ್ ಗಳೇ ಹೆಚ್ಚಿನ ಬಡ್ಡಿಯನ್ನು ನಮಗೆ ನೀಡೋದು ಎಂಬ ಮಾಹಿತಿ ಅನೇಕರಿಗೆ ಗೊತ್ತಿಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಗಿಂತ ಸಣ್ಣ ಬ್ಯಾಂಕ್ ಗಳು ಉಳಿತಾಯ ಖಾತೆ ಹಾಗೂ ಸ್ಥಿರ ಠೇವಣಿ ಮೇಲೆ ನಿಮಗೆ ಹೆಚ್ಚಿನ ಬಡ್ಡಿ ನೀಡುತ್ತವೆ. ಅದರಲ್ಲಿ ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಕೂಡ ಸೇರಿದೆ.
ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಎಫ್ ಡಿ ಮೇಲಿನ ಬಡ್ಡಿ ದರವನ್ನು ಸದ್ಯ ಬದಲಿಸಿದೆ. ಜನವರಿ 2ರಿಂದಲೇ ಈ ಹೊಸ ಬಡ್ಡಿ ದರ ಅನ್ವಯವಾಗ್ತಿದೆ. ಬ್ಯಾಂಕ್ ಎಫ್ ಡಿ ಖಾತೆ ಹೊಂದಿರುವ ಹಿರಿಯ ನಾಗರಿಕರಿಗೆ ಒಂದು ವರ್ಷದ ಅವಧಿಗೆ ಶೇಕಡಾ 9ರಷ್ಟು ಬಡ್ಡಿಯನ್ನು ನೀಡ್ತಿದೆ. ಸಾಮಾನ್ಯ ಜನರಿಗೆ ಶೇಕಡಾ 8.50ರಷ್ಟು ಬಡ್ಡಿಯನ್ನು ನೀಡ್ತಿದೆ.
ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನ ಬಡ್ಡಿ ದರಗಳು ಅವಧಿಗೆ ತಕ್ಕಂತೆ ಭಿನ್ನವಾಗಿದೆ. 7-14 ದಿನಗಳಲ್ಲಿ ಪಕ್ವವಾಗುವ ಎಫ್‌ಡಿಗಳ ಮೇಲೆ ಶೇಕಡಾ 3 ರಷ್ಟು ಬಡ್ಡಿ ಸಿಗ್ತಿದೆ. 15-60 ದಿನಗಳಲ್ಲಿ ಪಕ್ವವಾಗುವ ಎಫ್‌ಡಿಗಳ ಮೇಲೆ ಶೇಕಡಾ 4.25 ಬಡ್ಡಿ ನೀಡಲಾಗ್ತಿದೆ. 61 ರಿಂದ 90 ದಿನಗಳ ಎಫ್ ಡಿ ಗೆ ಬ್ಯಾಂಕ್ ಶೇಕಡಾ 5ರಷ್ಟು ಮತ್ತು 91 ರಿಂದ 180 ದಿನಗಳ ಎಫ್ ಡಿಗೆ ಶೇಕಡಾ 6.50ರಷ್ಟು ಬಡ್ಡಿ ನೀಡುತ್ತಿದೆ. ನೀವು 181ರಿಂದ 364 ದಿನಗಳಲ್ಲಿ ಪಕ್ವವಾಗುವ ಎಫ್ ಡಿ ಪಡೆದಿದ್ದರೆ ನಿಮಗೆ ಶೇಕಡಾ 8ರಷ್ಟು ಬಡ್ಡಿ ಸಿಗುತ್ತದೆ. ಇನ್ನು 365 ದಿನಗಳಲ್ಲಿ ಪಕ್ವವಾಗುವ ಠೇವಣಿಗಳ ಮೇಲಿನ ಬಡ್ಡಿ ದರ ಶೇಕಡಾ 8.50ರಷ್ಟಿದೆ.
ಸಣ್ಣ ಬ್ಯಾಂಕ್ ನಲ್ಲಿ ಹೂಡಿಕೆ ಮಾಡಿದ್ರೆ ಅಪಾಯ ಹೆಚ್ಚು ಎಂದು ಅನೇಕರು ಭಾವಿಸಿದ್ದಾರೆ. ಆದ್ರೆ ಬ್ಯಾಂಕ್ ದಿವಾಳಿಯಾದ್ರೆ ಅಥವಾ ಬ್ಯಾಂಕ್ ಡೀಫಾಲ್ಟ್ ಆಗಿದ್ದರೆ ಭಯಪಡಬೇಕಾಗಿಲ್ಲ. ನೀವು ಠೇವಣಿ ಮಾಡಿದ ಮೊತ್ತಕ್ಕೆ ನೀವು 5 ಲಕ್ಷ ರೂಪಾಯಿವರೆಗೆ ವಿಮಾ ರಕ್ಷಣೆಯನ್ನು ಪಡೆಯುತ್ತೀರಿ.