ತಿಂಗಳು ಪೂರ್ತಿ ಕೆಲಸ ಮಾಡಿದ್ರೂ ತಿಂಗಳ ಕೊನೆಯಲ್ಲಿ ಕೈನಲ್ಲಿ ಹಣವಿರೋದಿಲ್ಲ. ತಿಂಗಳ ಮೊದಲ ದಿನ ಬಂದ ಸಂಬಳ, ತಿಂಗಳ ಕೊನೆಯಲ್ಲಿ ಮಾಡಿದ ಸಾಲ ತೀರಿಸಲು ಸರಿಯಾಗುತ್ತದೆ ಎನ್ನುವವರಿದ್ದಾರೆ. ಉದ್ಯೋಗ ಮಾಡುವ ಬಹುತೇಕ ಪ್ರತಿಯೊಬ್ಬನ ಸಮಸ್ಯೆಯಿದು. ತಿಂಗಳ ಕೊನೆಯಲ್ಲಿ ಹಬ್ಬ ಬಂದ್ರೆ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವವರಿದ್ದಾರೆ. ಇದೇ ಕಾರಣಕ್ಕೆ ಮನೆಯಲ್ಲಿ ಜಗಳ ನಡೆಯುತ್ತದೆ.
ಆದ್ರೆ ತಿಂಗಳ ಕೊನೆಯಲ್ಲಿ ತೊಂದರೆಯಾಗದಂತೆ ನಾವು ಮಾಡಬಹುದು. ಅದಕ್ಕೆ ಕೆಲವೊಂದು ಯೋಜನೆ ರೂಪಿಸಿಕೊಂಡು ಅದರಂತೆ ನಡೆಯಬೇಕಾಗುತ್ತದೆ.
ಮೊದಲನೇಯದಾಗಿ ನಾವು ಹಣದ ಹರಿವನ್ನು ಅರ್ಥ ಮಾಡಿಕೊಳ್ಳಬೇಕು. ಇದು ಆದಾಯ ಮತ್ತು ವೆಚ್ಛವನ್ನು ಸರಿದೂಗಿಸಲು ನೆರವಾಗುತ್ತದೆ. ನಂತ್ರ ಅಗತ್ಯ ಹಾಗೂ ಬೇಕು ನಡುವೆ ವ್ಯತ್ಯಾಸ ಗೊತ್ತಿರಬೇಕು. ಅನೇಕರಿಗೆ ಇದು ತಿಳಿದಿಲ್ಲ. ಅತ್ಯಗತ್ಯ ಹಾಗೂ ಬೇಕು ಎಂಬುದನ್ನು ಪಟ್ಟಿ ಮಾಡಬೇಕಾಗುತ್ತದೆ. ಅಗತ್ಯವೆಂದ್ರೆ ಮನೆ ನಡೆಸಲು, ದಿನನಿತ್ಯ ಬೇಕಾಗುವ ವಸ್ತುಗಳು. ಬೇಕು ಎಂಬ ಸಾಲಿಗೆ ಸೇರುವ ವಸ್ತುಗಳು ಕೇವಲ ಬಯಕೆಯಾಗಿರುತ್ತವೆ. ಅದಿಲ್ಲದೆ ಕೂಡ ನಾವು ಜೀವನ ನಡೆಸಬಹುದಾಗಿದೆ.
ತಿಂಗಳ ಮೊದಲ ವಾರದಲ್ಲಿ ಕೈತುಂಬ ಹಣವಿದೆ ಎಂಬ ಕಾರಣಕ್ಕೆ ಎಲ್ಲ ವಸ್ತುಗಳನ್ನು ಖರೀದಿ ಮಾಡಬಾರದು. ಅಗತ್ಯ ವಸ್ತುಗಳನ್ನು ಪಟ್ಟಿ ಮಾಡಿಕೊಂಡು ಅದನ್ನು ಮಾತ್ರ ಖರೀದಿ ಮಾಡಬೇಕು. ಬೇಕು ಎಂಬ ವಸ್ತುಗಳನ್ನು ಒಂದು ತಿಂಗಳು ಮುಂದೂಡಿ ನೋಡಿ. ಇದ್ರಿಂದ ಆಗುವ ಬಜೆಟ್ ಸುಧಾರಣೆ ನಿಮಗೆ ಕಾಣುತ್ತದೆ.
ಬೇರೆ ಬೇರೆಯವರ ಆದಾಯ ಭಿನ್ನವಾಗಿರುತ್ತದೆ. ಹಾಗೆ ಕೇವಲ ಸಂಬಳ ಮಾತ್ರ ಆದಾಯವಲ್ಲ. ವ್ಯವಹಾರ, ಮನೆ ಬಾಡಿಗೆ, ಬಡ್ಡಿ ಹೀಗೆ ಬೇರೆ ಬೇರೆ ಮೂಲಗಳಿಂದ ಆದಾಯ ಬರುತ್ತದೆ. ಅದನ್ನು ತಿಳಿದಿರುವ ಜೊತೆಗೆ, ಆದಾಯ ಬರುವ ಜಾಗದಲ್ಲಿ ಹೂಡಿಕೆ ಮಾಡಬೇಕು. ಎಲ್ಲ ಹಣವನ್ನು ಮನೆಯ ಸಾಮಾನು ಖರೀದಿಗೆ ಖರ್ಚು ಮಾಡುವ ಬದಲು, ಹೂಡಿಕೆ ಮಾಡಬೇಕು.
ಇನ್ನೊಂದು ವೆಚ್ಚವನ್ನು ಲೆಕ್ಕ ಹಾಕುವುದು. ಪ್ರತಿ ದಿನ ಮಾಡಿದ ಖರ್ಚಿನ ಲೆಕ್ಕ ಬರೆಯಬೇಕು. ಸಾಮಾನ್ಯವಾಗಿ ಎಷ್ಟು ಆದಾಯ ಬರ್ತಿದೆ ಎಂಬುದು ಗೊತ್ತಿರುತ್ತದೆ. ಆದ್ರೆ ಎಲ್ಲಿ ಖರ್ಚಾಗ್ತಿದೆ ಎಂಬುದು ಗೊತ್ತಿರುವುದಿಲ್ಲ. ಹಾಗಾಗಿ ಪ್ರತಿ ದಿನ ಲೆಕ್ಕ ಬರೆದಿಟ್ಟಲ್ಲಿ ಅದ್ರ ಚಿತ್ರಣ ಸಿಗುತ್ತದೆ. ಮೂರು ತಿಂಗಳುಗಳ ಕಾಲ ಪ್ರತಿ ದಿನ ಖರ್ಚನ್ನು ಬರೆದಿಡಿ. ನಂತ್ರ ಅದನ್ನು ಲೆಕ್ಕ ಮಾಡಿ. ಆದಾಯಕ್ಕಿಂತ ಖರ್ಚು ಕಡಿಮೆಯಿದ್ದರೆ ಉಳಿದ ಹಣವನ್ನು ಒಳ್ಳೆಯ ಜಾಗದಲ್ಲಿ ಹೂಡಿಕೆ ಮಾಡಿ. ಒಂದು ವೇಳೆ ಆದಾಯ ಕಡಿಮೆಯಿದ್ದು ,ಖರ್ಚು ಹೆಚ್ಚಿದ್ದರೆ, ನಿಮ್ಮ ಖರ್ಚನ್ನು ನಿಯಂತ್ರಿಸಬೇಕು ಎಂದರ್ಥ. ಹಾಗಾಗಿ ಅನಗತ್ಯ ವಸ್ತುಗಳ ಖರೀದಿ, ಅನಗತ್ಯ ಖರ್ಚನ್ನು ಕಡಿಮೆ ಮಾಡಿ.