ಬೆಂಗಳೂರು: ಅತಿವೃಷ್ಟಿ ಹಾನಿಗೆ ಸರ್ಕಾರದಿಂದ ಹೆಚ್ಚಿನ ಪರಿಹಾರ ಘೋಷಿಸಲಾಗಿದೆ. ಮಾರ್ಗಸೂಚಿಗಳನ್ನು ಮೀರಿ ಹೆಚ್ಚಿನ ಪರಿಹಾರ ಪ್ರಕಟಿಸಲಾಗಿದೆ. ಗೃಹೋಪಯೋಗಿ ವಸ್ತುಗಳು, ಬಟ್ಟೆಬರೆ ಹಾನಿಗೆ 3800 ರೂ.ನಿಂದ 10 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು.
ಶೇಕಡ 75 ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಹಾನಿಗೊಳಗಾದ ಮನೆ ನಿರ್ಮಾಣಕ್ಕೆ 96,100 ರೂ.ನಿಂದ 5 ಲಕ್ಷ ರೂ. ಪರಿಹಾರ ನೀಡಲಾಗುವುದು.
ಶೇಕಡ 25 ರಿಂದ ಶೇಕಡ 75 ರಷ್ಟು ಮನೆ ಹಾನಿ ಕೆಡವಿ ಕಟ್ಟಲು 95,100 ರೂ.ನಿಂದ 5 ಲಕ್ಷ ರೂ. ಪರಿಹಾರ ಕೊಡಲಾಗುತ್ತದೆ. ಮನೆ ದುರಸ್ತಿಗೆ 3 ಲಕ್ಷ ರೂಪಾಯಿ ಹಾಗೂ ಭಾಗಶಃ ಹಾನಿಗೆ 10 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು.
ಎನ್.ಡಿ.ಆರ್.ಎಫ್. ಮತ್ತು ಎಸ್.ಡಿ.ಆರ್.ಎಫ್. ಮಾರ್ಗಸೂಚಿಗಿಂತಲೂ ಹೆಚ್ಚಿನ ಮೊತ್ತದ ಪರಿಹಾರ ಘೋಷಿಸಲಾಗಿದೆ. ರಾಜ್ಯದಲ್ಲಿ ಜುಲೈ ಕೊನೆಯ ವಾರ ಸುರಿದ ಭಾರಿ ಮಳೆಗೆ, 61 ತಾಲೂಕುಗಳಲ್ಲಿ ಭಾರಿ ಹಾನಿ ಉಂಟಾಗಿದೆ. ಗೃಹೋಪಯೋಗಿ ವಸ್ತುಗಳು, ಮನೆ, ಬೆಳೆ, ಜಾನುವಾರು ಮೂಲಸೌಕರ್ಯ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ.
ಅತಿವೃಷ್ಟಿಯಿಂದ ಸಂತ್ರಸ್ತರಾದ ಅರ್ಹರ ವಿವರವನ್ನು ರಾಜೀವ್ ಗಾಂಧಿ ವಸತಿ ನಿಗಮದಿಂದ ಅಭಿವೃದ್ಧಿಪಡಿಸಿರುವ ತಂತ್ರಾಂಶದಲ್ಲಿ ದಾಖಲಿಸುವಂತೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದ್ದು, ವಿಪತ್ತು ಪರಿಹಾರ ನಿಧಿಯಿಂದ ಸಂತ್ರಸ್ತರಿಗೆ ಪರಿಹಾರ ಒದಗಿಸುವಂತೆ ತಿಳಿಸಲಾಗಿದೆ.