ನವದೆಹಲಿ: ಜಾರ್ಖಂಡ್ ನಲ್ಲಿ ಅಕ್ರಮ ಗಣಿಗಾರಿಕೆ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ಬೆಳಿಗ್ಗೆ ರಾಂಚಿ ಮತ್ತು ರಾಜಸ್ಥಾನದ 12 ಸ್ಥಳಗಳಲ್ಲಿ ಶೋಧ ನಡೆಸಿದೆ.
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಮಾಧ್ಯಮ ಸಲಹೆಗಾರ ಅಭಿಷೇಕ್ ಪ್ರಸಾದ್ ಅವರ ಮೇಲೆ ದಾಳಿ ನಡೆಸಲಾಗಿದೆ. ಜಾರಿ ನಿರ್ದೇಶನಾಲಯದ ಕ್ರಮವನ್ನು ಎದುರಿಸುತ್ತಿರುವ ಇತರ ವ್ಯಕ್ತಿಗಳಲ್ಲಿ ಹಜಾರಿಬಾಗ್ ಉಪ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ದುಬೆ ಮತ್ತು ಸಾಹಿಬ್ ಗಂಜ್ ಜಿಲ್ಲಾಧಿಕಾರಿ ರಾಮ್ ನಿವಾಸ್ ಸೇರಿದ್ದಾರೆ.
ಭೂ ಹಗರಣಕ್ಕೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣದಲ್ಲಿ, ಜಾರಿ ನಿರ್ದೇಶನಾಲಯವು ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ಏಳನೇ ಬಾರಿಗೆ ಸಮನ್ಸ್ ಜಾರಿ ಮಾಡಿದ್ದು, ಅವರ ಹೇಳಿಕೆಯನ್ನು ದಾಖಲಿಸುವಂತೆ ಕೋರಿದೆ. ನೋಟಿಸ್ ಸ್ವೀಕರಿಸಿದ ಏಳು ದಿನಗಳಲ್ಲಿ ಮನಿ ಲಾಂಡರಿಂಗ್ ತಡೆ ಕಾಯ್ದೆ, 2002 ರ ಸೆಕ್ಷನ್ 50 ರ ಅಡಿಯಲ್ಲಿ ಹೇಳಿಕೆ ನೀಡಲು ಇದು ಕೊನೆಯ ಅವಕಾಶ ಎಂದು ಇಡಿ ಸೊರೆನ್ ಅವರಿಗೆ ಎಚ್ಚರಿಕೆ ನೀಡಿದೆ.