ಬಾಲ್ಯದಲ್ಲಿ ಹೆತ್ತವರು ಚಾಕೊಲೇಟ್ ನಿರಾಕರಿಸುವುದು ಸಹಜ. ಆದರೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಉದಾಹರಣೆ ಇದೆಯೇ ? ಮಧ್ಯಪ್ರದೇಶದ ಬುರ್ಹಾನ್‌ಪುರದ ಮೂರು ವರ್ಷದ ಪುಟ್ಟ ಬಾಲಕ, ಪೊಲೀಸ್ ಠಾಣೆಯಲ್ಲಿ ತನ್ನ ತಾಯಿಯ ಬಗ್ಗೆ ದೂರಿದ್ದಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗಿದ್ದಾನೆ.
ಮಗು ತನ್ನ ತಾಯಿಯು ಮಿಠಾಯಿಗಳನ್ನು ಕದ್ದಿದ್ದಕ್ಕಾಗಿ ಮತ್ತು ತಾನು ಸಿಹಿತಿಂಡಿಗಾಗಿ ಅತ್ತಾಗ ತನ್ನನ್ನು ಹೊಡೆಯುವ ಕಾರಣಕ್ಕಾಗಿ ಆಕೆಯನ್ನು ಜೈಲಿಗೆ ಹಾಕುವಂತೆ ಪೊಲೀಸರನ್ನು ಕೇಳಿಕೊಂಡಿದ್ದಾನೆ.
3 ವರ್ಷದ ಮಗು ತನ್ನ ತಂದೆಯೊಂದಿಗೆ ಠಾಣೆಗೆ ಬಂದಿತ್ತು. “ಅಮ್ಮ ನನ್ನ ಚಾಕೊಲೇಟ್ ಕದ್ದಿದ್ದಾಳೆ, ಅಮ್ಮನನ್ನು ಜೈಲಿಗೆ ಹಾಕಬೇಕು” ಎಂದು ಮಗು ಹೇಳಿದೆ. ಮಹಿಳಾ ಕಾನ್ಸ್‌ಟೇಬಲ್ ಮಗುವಿನ ಕಳವಳವನ್ನು ಆಲಿಸಿ ಅಚ್ಚರಿಪಟ್ಟರು. ನಂತರ ಮಗುವಿನ ಖುಷಿಗಾಗಿ ದೂರನ್ನು ದಾಖಲಿಸುವಂತೆ ನಟಿಸಿದ್ದಾರೆ.
ಬಳಿಕ ಮಹಿಳಾ ಕಾನ್ಸ್‌ಟೇಬಲ್ ದೂರನ್ನು ಆಲಿಸಿ, ತಾಯಿ ಚಾಕೊಲೇಟ್ ನೀಡದೇ ಇರುವುದರ ಹಿಂದೆ ಯಾವುದೇ ದುರುದ್ದೇಶವಿಲ್ಲ ಎಂದು ಮಗುವಿಗೆ ಮನವರಿಕೆ ಮಾಡಿಕೊಟ್ಟರು.
ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಮಗು ಪೊಲೀಸರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮಗು ತನ್ನ ಕಳವಳವನ್ನು ವ್ಯಕ್ತಪಡಿಸುತ್ತಿರುವ ದೃಶ್ಯಗಳು ಜನಸಾಮಾನ್ಯರ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅದು ಟ್ರೆಂಡಿಂಗ್ ಆಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಮಗುವನ್ನು ತನ್ನ ತಾಯಿಯ ವಿರುದ್ಧ ದೂರು ದಾಖಲಿಸುವಂತೆ ಪದೇ ಪದೇ ಒತ್ತಾಯಿಸಿದ ನಂತರ ಆತನ ತಂದೆ ಪೊಲೀಸ್ ಠಾಣೆಗೆ ಕರೆತಂದರು.