
ಮುಂಬೈ: ಚಲನಚಿತ್ರದಿಂದ ಪ್ರೇರಿತನಾಗಿ 13 ವರ್ಷದ ಬಾಲಕನೊಬ್ಬ ತನ್ನ ಆರು ವರ್ಷದ ಸೋದರ ಸಂಬಂಧಿಯನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಘಟನೆ ಮಾರ್ಚ್ 1 ರಂದು ಮುಂಬೈನ ನಲಾ ಸೋಪಾರದಲ್ಲಿ ನಡೆದಿದೆ. ತನ್ನ ಕುಟುಂಬದವರು ತನ್ನ ಸೋದರಸಂಬಂಧಿ ಮೇಲೆ ಹೆಚ್ಚು ಒಲವು ತೋರುತ್ತಿದ್ದಾರೆ ಎಂಬ ಭಾವನೆಯಿಂದ ಬಾಲಕ ಕೃತ್ಯವೆಸಗಿದ್ದಾನೆ. ಕೃತ್ಯ ಎಸಗುವ ಮೊದಲು ಬೆಟ್ಟದ ಮೇಲಿನ ನಿರ್ಜನ ಪ್ರದೇಶಕ್ಕೆ ಅವಳನ್ನು ಕರೆದೊಯ್ದಿದ್ದಾನೆ.
ಪೊಲೀಸರು ಬಾಲಕನನ್ನು ವಶಕ್ಕೆ ಪಡೆದು ಬಾಲಾಪರಾಧಿ ಗೃಹಕ್ಕೆ ಕಳುಹಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಪೊಲೀಸರ ಪ್ರಕಾರ, ಸೋದರಸಂಬಂಧಿಗಳ ಕುಟುಂಬಗಳು ಒಟ್ಟಿಗೆ ವಾಸಿಸುತ್ತಿದ್ದವು. ಸಂಜೆ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ಹುಡುಗಿ ಕಾಣೆಯಾದಾಗ, ಹುಡುಕಾಟ ಪ್ರಾರಂಭವಾಯಿತು. 13 ವರ್ಷದ ಬಾಲಕ ಹುಡುಗಿಯೊಂದಿಗೆ ಬೆಟ್ಟದ ಕಡೆಗೆ ಹೋಗುತ್ತಿರುವುದು ಕಂಡು ಬಂದಿದೆ. ಆದರೆ ಅವನು ಒಬ್ಬಂಟಿಯಾಗಿ ಹಿಂತಿರುಗಿದ್ದಾನೆ ಎನ್ನುವುದು ಸಿಸಿಟಿವಿ ದೃಶ್ಯ ವೀಕ್ಷಿಸಿದಾಗ ಗೊತ್ತಾಗಿದೆ.
ಬೆಟ್ಟದ ಮೇಲೆ ಇಬ್ಬರು ಪುರುಷರು ನನ್ನ ಮೇಲೆ, ಬಾಲಕಿ ಮೇಲೆ ದಾಳಿ ಮಾಡಿದ್ದಾರೆ. ನಾನು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದೆ ಎಂದು ಬಾಲಕ ಆರಂಭದಲ್ಲಿ ಹೇಳಿದ್ದ. ಆದರೆ, ಮತ್ತಷ್ಟು ಪ್ರಶ್ನಿಸಿದಾಗ, ಅವನ ಉತ್ತರಗಳು ವ್ಯತಿರಿಕ್ತವಾದವು. ವಿಚಾರಣೆ ಮುಂದುವರೆದಂತೆ ಹುಡುಗಿಯನ್ನು ಕತ್ತು ಹಿಸುಕಿ ನಂತರ ಕಲ್ಲಿನಿಂದ ಹೊಡೆದಿದ್ದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರನ್ನು ಹುಡುಗಿಯ ಶವ ಪತ್ತೆಯಾದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾನೆ.