ಮೂತ್ರಪಿಂಡ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಜನಪ್ರಿಯ ಮಲಯಾಳಂ ನಟ ರಿಜಾಬಾವ ಕೊನೆಯುಸಿರೆಳೆದಿದ್ದಾರೆ.
ಸೋಮವಾರ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ರಿಜಾಬಾವ ನಿಧನರಾದರು ಎಂದು ತಿಳಿದು ಬಂದಿದೆ. ಇವರಿಗೆ 54 ವರ್ಷ ವಯಸ್ಸಾಗಿತ್ತು. 1990ರಲ್ಲಿ ಪ್ರಾರಂಭವಾದ ನಟನ ವೃತ್ತಿ ಜೀವನದಲ್ಲಿ ಅತ್ಯಂತ ಯಶಸ್ವಿ ಚಿತ್ರ ಡಾ.ಪಶುಪತಿ.
ಅವರು 120ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ರಿಜಾಬಾವ ಸಿನಿಮಾಗಳಲ್ಲಿ ಖಳನಾಯಕನಾಗಿ, ನಾಯಕನಾಗಿ, ಹಾಸ್ಯ ಪಾತ್ರಗಳಲ್ಲಿ ಅದ್ಭುತವಾಗಿ ಅಭಿನಯಸಿದ್ದಾರೆ.
ಇವರ ನಿಧನಕ್ಕೆ ಖ್ಯಾತ ನಿರ್ದೇಶಕ ಶಾಜಿ ಕೈಲಾಸ್ ಸಂತಾಪ ಸೂಚಿಸಿದ್ದು, ತಾನೊಬ್ಬ ಉತ್ತಮ ಸ್ನೇಹಿತನನ್ನು ಕಳೆದುಕೊಂಡಿರುವುದಾಗಿ ದುಃಖಿಸಿದ್ದಾರೆ. ನಟರಾದ ಪೃಥ್ವಿರಾಜ್ ಸುಕುಮಾರನ್, ದುಲ್ಕರ್ ಸಲ್ಮಾನ್ ಕೂಡ ರಿಜಾಬಾವ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ರಿಜಾಬಾವರ ಜನಪ್ರಿಯ ಚಿತ್ರಗಳಲ್ಲಿ ಹರಿಹರನಗರ, ಮಲಪ್ಪುರಂ ಹಾಜಿ ಮಹಾನಾಯ ಜೋಜಿ, ಪೊಕ್ಕಿರಿರಾಜ ಸೇರಿವೆ. ಜೊತೆಗೆ ಮಲಯಾಳಂ ಧಾರವಾಹಿಗಳಲ್ಲಿ ಇವರು ಬಹು ಬೇಡಿಕೆಯ ನಟರಾಗಿದ್ದರು. ಜನಪ್ರಿಯ ಡಬ್ಬಿಂಗ್ ಕಲಾವಿದರಾಗಿದ್ದ ಇವರು 2010ರಲ್ಲಿ ಕರ್ಮಯೋಗಿ ಚಿತ್ರದ ಡಬ್ಬಿಂಗ್ ಗಾಗಿ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದರು.