ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿನಿ ಅನನ್ಯಾ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಆಳ್ವಾಸ್ ಕಾಲೇಜಿನ ಅನನ್ಯಾ 600 ಕ್ಕೆ 60 ಅಂಕ ಪಡೆದುಕೊಂಡಿದ್ದು, ಅವರಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದ ಮೂರು ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು. ಅವರ ಮುಂದಿನ ಶಿಕ್ಷಣವನ್ನು ಸಂಸ್ಥೆಯಿಂದ ಉಚಿತವಾಗಿ ನೀಡಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ತಿಳಿಸಿದ್ದಾರೆ.
ಕೊಡಗಿನ ಕುಶಾಲನಗರದ ನಿವೃತ್ತ ಸೈನಿಕ ಅಶೋಕ್ ಹಾಗೂ ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ನಳಿನಿ ಅವರ ಪುತ್ರಿಯಾಗಿರುವ ಅನನ್ಯಾ ರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿಯಾಗಿದ್ದಾರೆ. ಆಳ್ವಾಸ್ ನಲ್ಲಿ ಕ್ರೀಡಾ ಕೋಟಾದಲ್ಲಿ ಪ್ರಥಮ ಪಿಯುಸಿಗೆ ಸೇರ್ಪಡೆಯಾಗಿದ್ದ ಅವರು ನಂತರ ಕಾರಣಾಂತರದಿಂದ ಕ್ರೀಡೆಯಲ್ಲಿ ಮುಂದುವರೆಯಲಾಗದೆ ಓದಿನ ಕಡೆ ಗಮನಹರಿಸಿದ್ದರು. ಅವರಿಗೆ ಮೂರು ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಮುಂದಿನ ಶಿಕ್ಷಣವನ್ನು ಉಚಿತವಾಗಿ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದ ಮೂಡಬಿದರೆಯ ದಿಶಾ ರಾವ್ ಅವರಿಗೆ ಒಂದು ಲಕ್ಷ ರೂ. ನಗದು ಪುರಸ್ಕಾರ, ಪದವಿ ಮತ್ತು ಸಿಎ ವ್ಯಾಸಂಗದ ವೆಚ್ಚವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆ ವತಿಯಿಂದ ಭರಿಸಲಾಗುವುದು ಎಂದು ಹೇಳಿದ್ದಾರೆ.