
ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ 2025 ರ ಗ್ರೂಪ್ ಎ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ತಮ್ಮ ಮೊದಲ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿಯೇ ಶಮಿ ಮೂರು ವಿಕೆಟ್ ಪಡೆದು ಮಿಂಚಿದ್ದಾರೆ. ಈ ಮೂಲಕ ಅವರು ಐಸಿಸಿ ವೈಟ್-ಬಾಲ್ ಟೂರ್ನಿಗಳಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಶಮಿ ಐಸಿಸಿ ಟೂರ್ನಿಗಳಲ್ಲಿ (ಒಡಿಐ ವಿಶ್ವಕಪ್, ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ) ಒಟ್ಟು 72 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಮ್ರೋಹಾದ ಈ 34 ವರ್ಷದ ವೇಗದ ಬೌಲರ್ 18 ಒಡಿಐ ವಿಶ್ವಕಪ್ ಪಂದ್ಯಗಳಲ್ಲಿ 55 ವಿಕೆಟ್‌ಗಳು, 14 ಟಿ20 ವಿಶ್ವಕಪ್ ಪಂದ್ಯಗಳಲ್ಲಿ 14 ವಿಕೆಟ್‌ಗಳು ಮತ್ತು ಚಾಂಪಿಯನ್ಸ್ ಟ್ರೋಫಿಯ ಒಂದು ಪಂದ್ಯದಲ್ಲಿ 3 ವಿಕೆಟ್‌ಗಳನ್ನು ಪಡೆದಿದ್ದಾರೆ.
ಈ ಸಾಧನೆಯೊಂದಿಗೆ ಶಮಿ, ಜಹೀರ್ ಖಾನ್ ಅವರ 71 ವಿಕೆಟ್‌ಗಳ ದಾಖಲೆಯನ್ನು ಮುರಿದಿದ್ದಾರೆ. ಜಹೀರ್ ಖಾನ್ 23 ಒಡಿಐ ವಿಶ್ವಕಪ್ ಪಂದ್ಯಗಳಲ್ಲಿ 44 ವಿಕೆಟ್‌ಗಳು, 9 ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಲ್ಲಿ 15 ವಿಕೆಟ್‌ಗಳು ಮತ್ತು 12 ಟಿ20 ವಿಶ್ವಕಪ್ ಪಂದ್ಯಗಳಲ್ಲಿ 12 ವಿಕೆಟ್‌ಗಳನ್ನು ಪಡೆದಿದ್ದರು.
ಶಮಿ ಮತ್ತು ಜಹೀರ್ ನಂತರ, ಜಸ್ಪ್ರೀತ್ ಬುಮ್ರಾ (68 ವಿಕೆಟ್‌ಗಳು), ರವೀಂದ್ರ ಜಡೇಜಾ (65 ವಿಕೆಟ್‌ಗಳು) ಮತ್ತು ರವಿಚಂದ್ರನ್ ಅಶ್ವಿನ್ (59 ವಿಕೆಟ್‌ಗಳು) ಈ ಪಟ್ಟಿಯಲ್ಲಿದ್ದಾರೆ.
ಇದಲ್ಲದೆ, ಶಮಿ ಒಡಿಐ ಕ್ರಿಕೆಟ್‌ನಲ್ಲಿ ವೇಗವಾಗಿ 200 ವಿಕೆಟ್‌ಗಳನ್ನು ಪಡೆದ ಭಾರತೀಯ ಬೌಲರ್ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ. ಅವರು ಕೇವಲ 104 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಹಿಂದೆ ಈ ದಾಖಲೆ ಅಜಿತ್ ಅಗರ್ಕರ್ ಹೆಸರಿನಲ್ಲಿತ್ತು (133 ಪಂದ್ಯಗಳು).