ಕೋವಿಡ್ -19 ಸಂದರ್ಭದಲ್ಲಿ ಅಪಾರ ಮಾನವೀಯತೆ ಕಾರ್ಯಗಳನ್ನು ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರವನ್ನು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಪರಿಗಣಿಸಬೇಕೆಂದು ಬಾಂಬೆ ಸ್ಟಾಕ್ ಎಕ್ಸ್ ಚೇಂಜ್(ಬಿಎಸ್ಇ)ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯಕಾರ್ಯಕಾರಿ ಅಧಿಕಾರಿ ಆಶಿಶ್ ಚೌಹಾಣ್ ನೊಬೆಲ್ ಶಾಂತಿ ಪ್ರಶಸ್ತಿ ಆಯ್ಕೆ ಸಮಿತಿಗೆ ಮನವಿ ಮಾಡಿದ್ದಾರೆ.
ಶುಕ್ರವಾರ ನಡೆದ ಐಐಎಂ ಕೊಲ್ಕತ್ತಾದ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಸಾಂಕ್ರಾಮಿಕದ ಅವಧಿಯಲ್ಲಿ ದೇಶದ 80 ಕೋಟಿಗೂ ಅಧಿಕ ಜನರಿಗೆ ಉಚಿತ ಪಡಿತರ ವಿತರಣೆ ಮಾಡಿದ್ದಾರೆ. 2020 ರಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಪಡೆದ ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮಕ್ಕಿಂತ ಮೋದಿ ಸರ್ಕಾರ ನೀಡಿರುವ ಕಾರ್ಯಕ್ರಮ ದೊಡ್ಡದಾಗಿದೆ ಎಂದು ಬಣ್ಣಿಸಿದ್ದಾರೆ.
ಸರ್ಕಾರ ತನ್ನ ಇತಿಮಿತಿಯಲ್ಲಿ ನಮಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿದೆ ಮತ್ತು ಸಾಂಕ್ರಾಮಿಕದ ಅವಧಿಯಲ್ಲಿ 80 ಕೋಟಿ ಜನರಿಗೆ ಪರಿತರ ಒದಗಿಸಿದೆ. ಈ ಕಾರ್ಯಕ್ರಮ ಈಗಲೂ ಮುಂದುವರಿದಿದೆ. ಇಂತಹ ಮಾನವೀಯ ಮೌಲ್ಯಗಳನ್ನು ಹೆಚ್ಚಿಸುವಂತಹ ಈ ಅಭೂತಪೂರ್ವವಾದ ಕಾರ್ಯವನ್ನು ನಾವು ಮತ್ತು ವಿಶ್ವ ಪರಿಗಣಿಸಿಲ್ಲ ಎಂದು ಹೇಳಿದರು.
ಮೋದಿ ಮತ್ತು ಅವರ ಸರ್ಕಾರ ಕೈಗೊಂಡಿರುವ ಈ ಕಾರ್ಯವನ್ನು ಪರಿಗಣಿಸಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕೆಂದು ಚೌಹಾಣ್ ಸಮಿತಿಗೆ ಮನವಿ ಮಾಡಿದ್ದಾರೆ.