ಮಂಗಳೂರು: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ನಾಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ರೋಡ್ ಶೋ ಆಯೋಜಿಸಲಾಗಿದೆ. ನಾಳೆ ಸಂಜೆ 7:30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಮೋದಿ ಆಗಮಿಸಲಿದ್ದಾರೆ.
7:45ಕ್ಕೆ ನಾರಾಯಣ ಗುರು ಸರ್ಕಲ್ ಗೆ ಮೋದಿ ಭೇಟಿ ನೀಡಲಿದ್ದಾರೆ. ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿ 2 ಕಿಮೀ ರೋಡ್ ಶೋ ನಡೆಸಲಿದ್ದಾರೆ. ಸುಮಾರು 45 ನಿಮಿಷಗಳ ಕಾಲ ಪ್ರಧಾನಿ ಮೋದಿ ಅವರ ರೋಡ್ ಶೋ ನಡೆಯಲಿದೆ. ರಾತ್ರಿ 8.30 ರೊಳಗೆ ಪ್ರಧಾನಿಯವರ ರೋಡ್ ಶೋ ಮುಕ್ತಾಯವಾಗುವ ಸಾಧ್ಯತೆ ಇದೆ.
ಮಂಗಳೂರಿನ ನಾರಾಯಣ ಗುರು ಸರ್ಕಲ್ ನಿಂದ ಲಾಲ್ಬಾಗ್, ಬಳ್ಳಾಲ್ ಬಾಗ್, ಗೋವಿಂದ ಪೈ ಸರ್ಕಲ್(ನವ ಭಾರತ್ ಸರ್ಕಲ್)ವರೆಗೆ ರೋಡ್ ಶೋ ನಡೆಯಲಿದೆ. ರಸ್ತೆಯ ಎರಡು ಕಡೆ ಬ್ಯಾರಿಕೇಡ್ ಹಾಕಿ ಎರಡು ಹಂತದ ಭದ್ರತೆ ಒದಗಿಸಲಾಗಿದೆ.
ಅಭ್ಯರ್ಥಿಗಳಾದ ಬ್ರಿಜೇಶ್ ಚೌಟ, ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್, ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸುವ ಸಾಧ್ಯತೆ ಇದೆ.
ಪ್ರಧಾನಿ ಮೋದಿ ಸಂಚರಿಸುವ ರಸ್ತೆಯಲ್ಲಿ ಆರು ಕಡೆ ಮಿನಿ ವೇದಿಕೆ ನಿರ್ಮಾಣ ಮಾಡಲಾಗಿದೆ. ವೇದಿಕೆಯಲ್ಲಿ ಹುಲಿ ಕುಣಿತ, ಭರತನಾಟ್ಯ, ಕಂಬಳ, ದೈವಾರಾಧನೆಗಳ ಪ್ರಾತ್ಯಕ್ಷಿಕೆ ಇರಲಿದೆ.