ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಸಹಕಾರ ಒಪ್ಪಂದದಡಿ ಪಶ್ಚಿಮ ಏಷ್ಯಾ ಯುದ್ಧಕ್ಕಾಗಿ ಇಸ್ರೇಲ್ ಸೇನೆಗೆ ಸುಮಾರು 15 ಸಾವಿರ ಭಾರತೀಯರನ್ನು ನೇಮಕ ಮಾಡಿಕೊಳ್ಳಲು ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಮೋದಿ ಸರ್ಕಾರದ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಸಹಕಾರವು ಪಶ್ಚಿಮ ಏಷ್ಯಾದ ಯುದ್ಧದ ನಡುವೆಯೇ ಇಸ್ರೇಲ್‌ನಲ್ಲಿ ಸುಮಾರು 15,000 ಭಾರತೀಯ ಕಾರ್ಮಿಕರ ನೇಮಕಾತಿಯನ್ನು ಸುಗಮಗೊಳಿಸುತ್ತಿದೆ. ಈ ಹಿಂದೆ ಅನೇಕ ಭಾರತೀಯ ಯುವಕರು ರಷ್ಯಾ-ಉಕ್ರೇನ್ ಯುದ್ಧಕ್ಕೆ ಹೋಗಲು ಸಂಶಯಾಸ್ಪದ ಏಜೆಂಟ್‌ಗಳಿಂದ ವಂಚನೆಗೊಳಗಾಗಿದ್ದರು. ಹಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ ಎಂದು ಖರ್ಗೆ ತಿಳಿಸಿದ್ದಾರೆ.
ಇದು ಮೋದಿ ಸರ್ಕಾರದ ಯುವ ವಿರೋಧಿ ನೀತಿಗಳಿಂದಾದ ನಿರುದ್ಯೋಗದ ಬಗ್ಗೆ ಹೇಳುತ್ತದೆ. ಕೌಶಲ್ಯವಿಲ್ಲದ, ಅರೆ-ಕುಶಲ ಮತ್ತು ವಿದ್ಯಾವಂತ ಯುವಕರು ತಮ್ಮ ಪ್ರಾಣವನ್ನು ಪಣಕ್ಕಿಡಲು ಮತ್ತು ಯುದ್ಧ-ಪ್ರೇರಿತ ಸ್ಥಳಗಳಲ್ಲಿ ಹೆಚ್ಚಿನ ಸಂಬಳದಲ್ಲಿ ಸೇವೆ ಸಲ್ಲಿಸಲು ಸಿದ್ಧರಿದ್ದಾರೆ ಎಂಬುದನ್ನು ಹೇಳುತ್ತದೆ ಎಂದಿದ್ದಾರೆ.