ಕಾನೂನುಗಳನ್ನು ಹಿಂಪಡೆಯುವುದಾಗಿ ಕೇಂದ್ರ ಸರ್ಕಾರ ಘೋಷಿಸಿದ ನಂತರವೂ ಪ್ರತಿಭಟನೆಯನ್ನು ಕೊನೆಗೊಳಿಸಲು ರೈತ ಸಂಘಟನೆ ಸಿದ್ಧವಾಗಿಲ್ಲ. ಇದೀಗ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಮನೆಗೆ ಮರಳುವಂತೆ ಮತ್ತೊಮ್ಮೆ ರೈತರಿಗೆ ಮನವಿ ಮಾಡಿದ್ದಾರೆ. ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನವೇ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಮಸೂದೆಯನ್ನು ಸರ್ಕಾರ ಮಂಡಿಸಲಿದೆ ಎಂದು ತೋಮರ್ ಹೇಳಿದ್ದಾರೆ.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಾತನಾಡಿ, ಬೆಳೆ ವೈವಿಧ್ಯೀಕರಣ, ಶೂನ್ಯ ಬಜೆಟ್ ಕೃಷಿ ಮತ್ತು ಎಂಎಸ್‌ಪಿ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ ಮತ್ತು ಪರಿಣಾಮಕಾರಿ ಮಾಡಲು ಸಮಿತಿ ರಚಿಸುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ. ಈ ಸಮಿತಿಯಲ್ಲಿ ರೈತ ಸಂಘಟನೆಗಳ ಪ್ರತಿನಿಧಿಗಳನ್ನೂ ಸೇರಿಸಿಕೊಳ್ಳಲಾಗುವುದು. ಈ ಸಮಿತಿ ರಚನೆಯಿಂದ ಎಂಎಸ್‌ಪಿ ಮೇಲಿನ ರೈತರ ಬೇಡಿಕೆಯೂ ಈಡೇರಲಿದೆ ಎಂದರು.
ಹೊಲಗದ್ದೆ ಸುಡುವುದನ್ನು ಕಾನೂನು ಬಾಹಿರವಾಗಿಸುವಂತೆ ರೈತ ಸಂಘಟನೆಗಳು ಒತ್ತಾಯಿಸಿದ್ದವು. ಈ ಬೇಡಿಕೆಯನ್ನೂ ಸರ್ಕಾರ ಒಪ್ಪಿಕೊಂಡಿದೆ. ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಘೋಷಣೆಯ ನಂತರ, ರೈತರು ಪ್ರತಿಭಟನೆ ಮುಂದುವರೆಸುವ ಅಗತ್ಯವಿಲ್ಲ. ಆಂದೋಲನವನ್ನು ಕೊನೆಗೊಳಿಸಿ ಮನೆಗೆ ಮರಳುವಂತೆ ನಾನು ರೈತರಲ್ಲಿ ಮನವಿ ಮಾಡುತ್ತೇನೆ ಎಂದಿದ್ದಾರೆ. ಪ್ರತಿಭಟನಾ ನಿರತ ರೈತರ ವಿರುದ್ಧ ದಾಖಲಾಗಿರುವ ದೂರುಗಳನ್ನು ವಾಪಸ್ ಪಡೆಯುವಂತೆ ರೈತ ಸಂಘ ಆಗ್ರಹಿಸಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರ ಇದ್ರ ನಿರ್ಧಾರ ತೆಗೆದುಕೊಳ್ಳಲಿದೆ ಎಂದಿದ್ದಾರೆ.