ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಒಡೆತನದ ಎಲೆಕ್ಟ್ರಿಕ್ ಕಾರು ಉತ್ಪಾದನಾ ಕಂಪನಿಯಾದ ಟೆಸ್ಲಾ ಪ್ರೇಮಿಗಳಿಗೆ ಖುಷಿ ಸುದ್ದಿಯೊಂದಿದೆ. ಟೆಸ್ಲಾದ ಇನ್ನೂ ಮೂರು ಎಲೆಕ್ಟ್ರಿಕ್ ಕಾರುಗಳಿಗೆ ಭಾರತದಲ್ಲಿ ಅನುಮೋದನೆ ಸಿಕ್ಕಿದೆ. ಇದ್ರಿಂದಾಗಿ ದೇಶದಲ್ಲಿ ಒಟ್ಟು 7 ಟೆಸ್ಲಾ ಎಲೆಕ್ಟ್ರಿಕ್ ರೂಪಾಂತರಗಳು ಮಾರಾಟವಾಗಲಿವೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ವೆಬ್‌ಸೈಟ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಆಗಸ್ಟ್ 2021 ರಲ್ಲಿ ಟೆಸ್ಲಾದ 4 ಇ-ಕಾರುಗಳಿಗೆ ಹೋಮೋಲೋಗೇಶನ್ ಪ್ರಮಾಣಪತ್ರಗಳನ್ನು ನೀಡಲಾಗಿತ್ತು. ಈಗ ಮತ್ತೆ ಮೂರು ರೂಪಾಂತರಗಳಿಗೆ ಪ್ರಮಾಣಪತ್ರ ಸಿಕ್ಕಿದೆ.
ಈಗ ಅನುಮೋದನೆ ಸಿಕ್ಕ ಮೂರು ರೂಪಾಂತರಗಳ ವಿನ್ಯಾಸದ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಟೆಸ್ಲಾದ ಕೆಲ ವಾಹನಗಳು ಭಾರತದ ರಸ್ತೆಯಲ್ಲಿ ಪರೀಕ್ಷಾರ್ಥ ಓಡಾಡುತ್ತಿದೆ. ಈವರೆಗೂ ಗ್ರಾಹಕರ ಕೈಗೆ ವಾಹನ ಸಿಕ್ಕಿಲ್ಲ. ಆಮದು ಸುಂಕದ ಬಗ್ಗೆ ಕೇಂದ್ರದ ಜೊತೆ ಮಾತುಕತೆ ನಡೆಯುತ್ತಿದೆ. ಆಮದು ಸುಂಕವನ್ನು ಶೇಕಡಾ 40ರಷ್ಟು ಕಡಿಮೆ ಮಾಡುವಂತೆ ಟೆಸ್ಲಾ ಬೇಡಿಕೆಯಿಟ್ಟಿದೆ. ಒಂದು ವೇಳೆ ಇದಕ್ಕೆ ಒಪ್ಪಿಗೆ ಸಿಕ್ಕಲ್ಲಿ, ಟೆಸ್ಲಾಗೆ ಅನುಮೋದನೆ ಸಿಕ್ಕರೆ ಭಾರತದಲ್ಲಿ ಕಾರ್ಖಾನೆ ಶುರು ಆಡಬಹುದು ಎಂದು ಮಸ್ಕ್ ಹೇಳಿದ್ದರು.