
ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್ 17ರ ನಾಳೆ 72ನೇ ಜನ್ಮದಿನಕ್ಕೆ ಕಾಲಿಡುತ್ತಿದ್ದು, ಇದರ ಆಚರಣೆಗೆ ದೇಶದಾದ್ಯಂತ ಭರ್ಜರಿ ಸಿದ್ಧತೆ ನಡೆಯುತ್ತಿದೆ. ತಮಿಳುನಾಡಿನ ಬಿಜೆಪಿ ಘಟಕ ಅಲ್ಲಿನ ಆರ್ ಎಸ್ ಆರ್ ಎಂ ಆಸ್ಪತ್ರೆಯಲ್ಲಿ ನಾಳೆ ಜನಿಸುವ ಪ್ರತಿಯೊಂದು ಮಗುವಿಗೆ 2 ಗ್ರಾಂ ಚಿನ್ನದ ಉಂಗುರವನ್ನು ಕಾಣಿಕೆಯಾಗಿ ನೀಡುತ್ತಿದೆ.
ಇದರ ಜೊತೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದ ಜನತೆಗೆ ಮೋದಿ ಅವರ ಎಪ್ಪತ್ತೆರಡನೇ ಜನ್ಮದಿನದ ಅಂಗವಾಗಿ 720 ಕೆಜಿ ತೂಕದ ಮೀನುಗಳನ್ನು ವಿತರಿಸಲಾಗುತ್ತಿದೆ. ರಾಷ್ಟ್ರ ರಾಜಧಾನಿಯಲ್ಲೂ ಮೋದಿ ಅವರ ಅಭಿಮಾನಿಗಳು ರಕ್ತದಾನ ಶಿಬಿರ, ಹೆಲ್ತ್ ಕ್ಯಾಂಪ್ ಮೊದಲಾದವುಗಳನ್ನು ಹಮ್ಮಿಕೊಂಡಿದ್ದಾರೆ.
ಇದೀಗ ದೆಹಲಿ ಮೂಲದ ರೆಸ್ಟೋರೆಂಟ್ ARDOR 2.0 ವಿಶಿಷ್ಟ ರೀತಿಯಲ್ಲಿ ಪ್ರಧಾನಿ ಮೋದಿಯವರ ಜನ್ಮದಿನಾಚರಣೆಗೆ ಮುಂದಾಗಿದ್ದು, ’56 inch ಮೋದಿಜಿ’ ಥಾಲಿ ಆರಂಭಿಸಿದೆ. ಒಟ್ಟು 56 ವಿವಿಧ ಬಗೆಯ ಖಾದ್ಯಗಳನ್ನು ಇದು ಹೊಂದಿರಲಿದ್ದು, ವೆಜ್ ಮತ್ತು ನಾನ್ ವೆಜ್ ಎರಡೂ ಇರಲಿದೆ.
ಈ ಕುರಿತಂತೆ ಮಾತನಾಡಿರುವ ರೆಸ್ಟೋರೆಂಟ್ ಮಾಲೀಕ ಸುಮಿತ್ ಕಾಲ್ರಾ, ನಾನು ಮೋದಿಜಿ ಅವರ ಕಟ್ಟಾ ಅಭಿಮಾನಿಯಾಗಿದ್ದು, ಅವರೇ ನಮ್ಮ ರೆಸ್ಟೋರೆಂಟ್ ಗೆ ಬಂದು ಈ ಖಾದ್ಯ ಸವಿಯಲು ಬಯಸುತ್ತೇನೆ. ಆದರೆ ಭದ್ರತೆ ಕಾರಣಕ್ಕೆ ಇದು ಸಾಧ್ಯವಾಗುವುದಿಲ್ಲ ಹೀಗಾಗಿ ಮೋದಿಯವರ ಅಭಿಮಾನಿಗಳಿಗೆ ಇದನ್ನು ಸಮರ್ಪಿಸುತ್ತಿದ್ದೇನೆ ಎಂದಿದ್ದಾರೆ.
ಸೆಪ್ಟೆಂಬರ್ 17 ರಿಂದ 26ರ ವರೆಗಿನ ಅವಧಿಯಲ್ಲಿ ಈ ಖಾದ್ಯವನ್ನು ದಂಪತಿಗಳ ಪೈಕಿ ಯಾರಾದರೂ ಒಬ್ಬರು 40 ನಿಮಿಷಗಳೊಳಗೆ ಸವಿದರೆ ಅವರಿಗೆ 8.5 ಲಕ್ಷ ರೂಪಾಯಿ ಬಹುಮಾನ ನೀಡಲಾಗುತ್ತದೆ. ಜೊತೆಗೆ ಲಕ್ಕಿ ಡ್ರಾ ನಲ್ಲಿ ವಿಜೇತರಾದ ದಂಪತಿಗೆ ಕೇದಾರನಾಥ ಪ್ರವಾಸಕ್ಕೆ ಹೋಗುವ ಅವಕಾಶ ಸಿಗುತ್ತದೆ ಎಂದು ಮಾಲೀಕ ಸುಮಿತ್ ಮಾಹಿತಿ ನೀಡಿದ್ದಾರೆ.