ನವದೆಹಲಿ: ಬಳಕೆ ಮಾಡದೇ ಇದ್ದ ಕಾರಣಕ್ಕೆ ನಿಷ್ಕ್ರಿಯಗೊಂಡ ಹಾಗೂ ಬಳಕೆದಾರರ ಕೋರಿಕೆ ಮೇರೆಗೆ ಸಂಪರ್ಕ ಕಡಿತ ಮಾಡಲಾದ ಮೊಬೈಲ್ ದೂರವಾಣಿ ಸಂಖ್ಯೆಗಳನ್ನು ಕನಿಷ್ಠ 90 ದಿನಗಳವರೆಗೆ ಹೊಸ ಚಂದಾದಾರರಿಗೆ ನೀಡುವುದಿಲ್ಲ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದೆ.
ಬಳಕೆ ಮಾಡದೇ ಇದ್ದ ಕಾರಣಕ್ಕೆ ಮೊಬೈಲ್ ದೂರವಾಣಿ ಸಂಖ್ಯೆ ಕಡಿತಮಾಡಿದ ನಂತರ ಅಥವಾ ಸಂಪರ್ಕ ನಿಷ್ಕ್ರಿಯಗೊಳಿಸಿದ ನಂತರ ದತ್ತಾಂಶವನ್ನು ದುರ್ಬಳಕೆ ಮಾಡಿಕೊಳ್ಳಬಹುದು ಎಂಬ ಬಗ್ಗೆ ಆತಂಕ ಹೆಚ್ಚುತ್ತಿರುವ ಕುರಿತು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ಎಸ್.ವಿ.ಎನ್ ಭಟ್ ಅವರ ಪೀಠ, ಖಾಸಗಿತನವನ್ನು ಕಾಪಾಡಿಕೊಳ್ಳುವ ಕೆಲಸ ಮಾಡಬೇಕಿರುವುದು ಮೊಬೈಲ್ ದೂರವಾಣಿ ಸಂಖ್ಯೆಯನ್ನು ಹಿಂದೆ ಬಳಸುತ್ತಿರುವವರು ಎಂದು ಅಭಿಪ್ರಾಯ ಪಟ್ಟಿದೆ.
ಮರುಬಳಕೆ ಫೋನ್ ನಂಬರ್ ಗಳ ವಿಚಾರವಾಗಿ ಗೊಂದಲಗಳು ಉಂಟಾಗದಂತೆ ನೋಡಿಕೊಳ್ಳಲು ಖಾತೆಯಲ್ಲಿ ಚಟುವಟಿಕೆ ಇಲ್ಲದಿರುವುದನ್ನು ಗಮನಿಸಲಾಗುತ್ತದೆ. 45 ದಿನಗಳವರೆಗೆ ಖಾತೆಯಲ್ಲಿ ಚಟುವಟಿಕೆಗಳು ಇಲ್ಲ ಎಂದಾದರೆ ನಂತರ ಇನ್ನೊಂದು ಮೊಬೈಲ್ ಫೋನ್ ನಲ್ಲಿ ಖಾತೆ ಸಕ್ರಿಯವಾಯಿತು ಎಂದಾದರೆ ಹಳೆಯ ಖಾತೆಯ ದತ್ತಾಂಶಗಳನ್ನು ತೆಗೆದುಹಾಕಲಾಗುತ್ತದೆ ಎಂದು ವಾಟ್ಸಾಪ್ ಸಹಾಯವಾಣಿ ಕೇಂದ್ರದಲ್ಲಿರುವ ಮಾಹಿತಿಗಳನ್ನು ಕೋರ್ಟ್ ದಾಖಲಿಸಿಕೊಂಡಿದೆ.